ಉತ್ತರ ಪ್ರದೇಶದ ಜೈಲಿನಲ್ಲಿದ್ದ ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವಿನ ಬಗ್ಗೆ ಪುತ್ರ ಸ್ಫೋಟಕ ಆರೋಪ ಮಾಡಿದ್ದಾರೆ. ಮುಖ್ತಾರ್ ಪುತ್ರ ಉಮರ್ ಅನ್ಸಾರಿ ಸ್ಫೋಟಕ ಹೇಳಿಕೆ ನೀಡಿದ್ದು, ನನ್ನ ತಂದೆಗೆ ವಿಷ ನೀಡಿ, ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದ್ದಾರೆ ಅಂತ ಉಮರ್ ಆರೋಪಿಸಿದ್ದಾರೆ. ಅಲ್ಲದೆ, ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಹೇಳಿದ್ದಾರೆ. ಮುಖ್ತಾರ್ ಅನ್ಸಾರಿ ಅವರು ಹೃದಯಾಘಾತದಿಂದ ಆರೋಗ್ಯ ಹದಗೆಟ್ಟ ಕಾರಣ ಗುರುವಾರ ನಿಧನರಾಗಿದ್ದಾರೆ. ಜೈಲಿನಲ್ಲಿದ್ದ ದರೋಡೆಕೋರನನ್ನು ಗಾಜಿಪುರದ ಬಂದಾದಲ್ಲಿರುವ ಬಂದಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು,
ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. 2 ದಿನಗಳ ಹಿಂದೆ ಅನ್ಸಾರಿ ಅವರು ಹೊಟ್ಟೆ ನೋವಿನ ಬಗ್ಗೆ ಹೇಳಿಕೊಂಡಾಗ ಆಸ್ಪತ್ರೆಗೆ ಕರೆದೊಯ್ದು ಸುಮಾರು 14 ಗಂಟೆಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಈ ನಡುವೆ ತಂದೆ ಸಾವು ಕುರಿತು ಹೇಳಿಕೆ ನೀಡಿರುವ ಉಮರ್ ಅನ್ಸಾರಿ. ತಂದೆಯ ಸಾವಿನ ಬಗ್ಗೆ ನನಗೆ ಅಧಿಕಾರಿಗಳ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ನಮ್ಮ ಕುಟುಂಬಕ್ಕೆ ಮಾಧ್ಯಮಗಳ ಮೂಲಕ ವಿಷಯ ಗೊತ್ತಾಯ್ತು. ಎರಡು ದಿನಗಳ ಹಿಂದೆ ನಾನು ಅವರನ್ನು ಭೇಟಿಯಾಗಲು ಬಂದಿದ್ದೆ. ಆದರೆ ನನಗೆ ಅವಕಾಶ ನೀಡಲಿಲ್ಲ. ನಾವು ಮೊದಲೇ ಹೇಳಿದಂತೆ ಸ್ಲೋ ಪಾಯ್ಸನ್ ನೀಡಿದ ಆರೋಪದ ಬಗ್ಗೆ ಮತ್ತೆ ಹೇಳುತ್ತೇವೆ ಅಂತ ಉಮರ್ ಅನ್ಸಾರಿ ಹೇಳಿದ್ದಾರೆ.