ಬೆಂಗಳೂರು ನಗರದ ನೀರಿನ ಸಮಸ್ಯೆಯನ್ನೇ ಮುಂದಿಟ್ಟುಕೊಂಡು, ಬೆಂಗಳೂರಿನ ಕೈಗಾರಿಕೆಗಳ ಒಲಿಸಿಕೊಳ್ಳುವ ಕೇರಳ ಪ್ರಯತ್ನ ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ಸಚಿವ ಎಂಬಿ ಪಾಟೀಲ್ ಕೇರಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ನೀರಿನ ಕೊರತೆ ಮುಂದಿಟ್ಟುಕೊಂಡು ರಾಜ್ಯದ ಐ.ಟಿ ಕಂಪನಿಗಳಿಗೆ ಕೇರಳ ಸರ್ಕಾರ ಸೆಳೆಯುವ ಪ್ರಯತ್ನ ಖಂಡನೀಯ. ಬರಗಾಲ ಮತ್ತು ಬೇಸಿಗೆಗೆ ನಮ್ಮ ದೇಶವೂ ಸೇರಿದಂತೆ ಜಗತ್ತಿನ ಹಲವೆಡೆ ನೀರಿನ ಕೊರತೆ ಉಂಟಾಗಿರುವುದು ಪ್ರಕೃತಿ ಸಹಜವಾದದ್ದು. ಇದಕ್ಕೆ ಕೇರಳ ರಾಜ್ಯವೂ ಹೊರತಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಕೈಗಾರಿಕಾ ಸಚಿವರಾದ ಪಿ. ರಾಜೀವ್ ಅವರು ಬೆಂಗಳೂರಿನಲ್ಲಿ ನೀರಿಲ್ಲವೆಂದು ತಮ್ಮ ರಾಜ್ಯಕ್ಕೆ ಬರುವಂತೆ ಇಲ್ಲಿನ ಐ.ಟಿ. ಕಂಪನಿಗಳಿಗೆ ಆಹ್ವಾನಿಸಿರುವುದನ್ನು ಗಮನಿಸಿದ್ದೇನೆ. ಇದು ಒಕ್ಕೂಟ ವ್ಯವಸ್ಥೆಯ ಧಕ್ಕೆ ತರಲಿದೆ. ಅವರ ಈ ನಡವಳಿಕೆ ಆರೋಗ್ಯಕರವಲ್ಲ ಅಂತ ಸಚಿವ ಎಂಬಿ ಪಾಟೀಲ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.