ಕೋಲಾರ ಕಾಂಗ್ರೆಸ್ ಬೂದಿ ಮುಚ್ಚಿದ ಕೆಂಡದಂತಿದೆ. ಬಣ ಬಡಿದಾಟದಿಂದ ಸೊರಗಿರುವ ಜಿಲ್ಲಾ ಕಾಂಗ್ರೆಸ್ಗೆ ಮದ್ದರಿಯಲು ಸ್ವತಃ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಿಂದಲೂ ಸಾಧ್ಯವಾಗುತ್ತಿಲ್ಲ. ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡದಂತೆ ಒತ್ತಾಯಿಸಿರುವ ರಮೇಶ್ ಕುಮಾರ್ ಬಣಕ್ಕೆ ಸೆಡ್ಡು ಒಡೆದಿರುವ ಮುನಿಯಪ್ಪ, ತಮ್ಮ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಹಕ್ಕೋತ್ತಾಯವನ್ನ ಮಂಡಿಸಿದ್ದಾರೆ. ರಾಜ್ಯದಲ್ಲಿ ಹತ್ತು ಕುಟುಂಬಗಳಿಗೆ ಟಿಕೆಟ್ ನೀಡಿದ್ದೀರಿ, ನಮ್ಮ ಕುಟುಂಬಕ್ಕೂ ಟಿಕೆಟ್ ಕೊಡಿ ಎಂಬ ವಾದ ಮುನಿಯಪ್ಪನವರದ್ದು. ಆದರೆ ಇದಕ್ಕೆ ಸುತಾರಾಂ ಒಪ್ಪದ ರಮೇಶ್ ಕುಮಾರ್ ಬಣ, ಒಂದು ವೇಳೆ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದ್ದರೆ, ನಾವು ತಟಸ್ಥರಾಗಿ ಉಳಿಯುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.
ಬಣಗಳ ಉಸಾಬರಿಯೇ ಬೇಡ ಎಂಬ ನಿಲುವಿಗೆ ಬಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬೆಂಗಳೂರು ಮೂಲದ ಗೌತಮ್ ಎಂಬುವವರನ್ನ ಅಭ್ಯರ್ಥಿ ಮಾಡುವ ಚಿಂತನೆಯಲ್ಲಿದ್ದಾರೆ. ಆದರೆ ಈ ಪರ್ಯಾಯ ಸೂತ್ರಕ್ಕೂ ಸೊಪ್ಪು ಹಾಕದ ಮುನಿಯಪ್ಪ, ಮೂರನೇ ವ್ಯಕ್ತಿಗೆ ಟಿಕೆಟ್ ನೀಡಿದ್ರೆ ಗೆಲುವು ಸಾಧ್ಯವಿಲ್ಲ ಅಂತ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಪಕ್ಷದ ಹಿರಿಯ ನಾಯಕ ಮುನಿಯಪ್ಪ ವರ್ತನೆ ವಿರುದ್ಧ ಸ್ವತಃ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜಿಲ್ಲಾ ನಾಯಕರ ಆಂತರಿಕ ಕಲಹದಿಂದ ಗೆಲ್ಲಬಹುದಾದ ಕ್ಷೇತ್ರವನ್ನ ಕಳೆದುಕೊಳ್ಳುವ ಆತಂಕದಲ್ಲಿದೆ ಕಾಂಗ್ರೆಸ್ ಜೋಡೆತ್ತು. ಹೀಗಾಗಿ ಮುಂದೇನು ಎಂಬ ಚರ್ಚೆಯಲ್ಲೇ ಮಗ್ನರಾಗಿದ್ದಾರೆ ಸಿದ್ದು,ಡಿಕೆಶಿ. ಮುನಿಯಪ್ಪ ತಮ್ಮ ಪಟ್ಟು ಸಡಿಲಿಸುತ್ತಿಲ್ಲ..ಇತ್ತ ಪರ್ಯಾಯ ಸೂತ್ರಕ್ಕೂ ಒಪ್ಪದಿರುವುದು ಹೈಕಮಾಂಡ್ ಕಣ್ಣು ಕೆಂಪಾಗಿಸಿದೆಯಂತೆ.ಆದರೆ ಬಹುತೇಕ ದಲಿತ ಎಡಗೈ ಸುಮುದಾಯಕ್ಕೆ ಸೇರಿರುವ ಗೌತಮ್ ಗೆ ಕೋಲಾರ ಲೋಕಸಭಾ ಟಿಕೆಟ್ ಘೋಷಣೆ ಆಗುವ ಸಕಲ ಸಾಧ್ಯತೆಗಳು ಇದೆ.