ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಆದರೆ ಕಾಂಗ್ರೆಸ್ ನಲ್ಲಿ ಮಾತ್ರ ಬಾಕಿ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲು ಹೆಣಗಾಡುತ್ತಿದೆ. ಕೋಲಾರದಲ್ಲಿ ಬಣ ಬಡಿದಾಟದದ ವಿಳಂಬ ಆಗುತ್ತಿದ್ದರೆ, ಇತ್ತ ಚಾಮರಾಜನಗರದಲ್ಲಿ ಮಂತ್ರಿಯನ್ನೇ ಕಣಕ್ಕಿಳಿಸುವ ಹಂಬಲದಲ್ಲಿದೆ ಕಾಂಗ್ರೆಸ್ ಹೈಕಮಾಂಡ್. ಆದರೆ ವರಿಷ್ಠರ ನಿರ್ಧಾರಕ್ಕೆ ಸಚಿವ ಹೆಚ್ ಸಿ ಮಹದೇವಪ್ಪ ಮಾತ್ರ ಸುತಾರಾಂ ಒಪ್ಪುತ್ತಿಲ್ಲವಂತೆ. ತನ್ನ ಬದಲಾಗಿ ನನ್ನ ಮಗ ಸುನೀಲ್ ಬೋಸ್ ಗೆ ಟಿಕೆಟ್ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಚಾಮರಾಜನಗರದಲ್ಲಿ ಮಹದೇವಪ್ಪ ಅವರನ್ನು ಕಣಕ್ಕಿಳಿಸಿ ರಾಷ್ಟ್ರರಾಜಕಾರಣಕ್ಕೆ ಕಳುಹಿಸುವ ಯೋಜನೆ ಸಿದ್ದರಾಮಯ್ಯ ಹೊಂದಿದ್ದಾರೆ. ತಮ್ಮ ನಿಷ್ಠಾವಂತರೊಬ್ಬರಿಗೆ ಸಚಿವ ಸ್ಥಾನ ನೀಡುವ ಉದ್ದೇಶ ಸಿದ್ದರಾಮಯ್ಯನವರದ್ದು. ಆದರೆ ಮಹದೇವಪ್ಪ ಇದಕ್ಕೆ ಸಾರಾಸಗಟಾಗಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಮಹದೇವಪ್ಪ ಹಠದಿಂದ ಇದೀಗ ಸುನೀಲ್ ಬೋಸ್ ಹೆಸರನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗುತ್ತಿದೆ. ಮತ್ತೊಬ್ಬ ಪ್ರಬಲ ಆಕಾಂಕ್ಷಿ ಮಾಜಿ ಶಾಸಕ ನಂಜುಂಡಸ್ವಾಮಿ ಖರ್ಗೆ ಅವರನ್ನು ಭೇಟಿ ಮಾಡಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಮಹದೇವಪ್ಪ ಸ್ಪರ್ಧಿಸದೇ ಇದ್ದರೆ ಕಾಂಗ್ರೆಸ್ಗೆ ಕ್ಷೇತ್ರ ಗೆಲ್ಲುವುದು ಕಷ್ಟ ಎಂದು ಸಮೀಕ್ಷೆಯೊಂದು ಹೇಳಿದೆ.