ಕಾಂಗ್ರೆಸ್ ವಿರುದ್ಧ ಬಿಜೆಪಿ ಪರಿವಾರ ರಾಜಕಾರಣದ ಆರೋಪದ ಬೆನ್ನಲೇ, ಪ್ರಿಯಾಂಕಾ ಗಾಂಧಿ ವಾದ್ರಾ ಪತಿ, ಸೋನಿಯಾ ಗಾಂಧಿ ಅಳಿಯ ಚುನಾವಣೆಗೆ ನಿಲ್ಲುವ ಆಸೆ ಹೊರಹಾಕಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ರಾಬರ್ಟ್ ವಾದ್ರಾ, ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಾನು ಆಸಕ್ತನಾಗಿದ್ದೇನೆ. ಕಳೆದ ಬಾರಿ ಅಮೇಥಿಯ ಜನ ತಾವು ಮಾಡಿರುವ ತಪ್ಪನ್ನ ಅರಿತುಕೊಂಡಿದ್ದಾರೆ. ಅಮೇಥಿಯಿಂದ ಆಯ್ಕೆ ಆಗಿರುವ ಸಂಸದೆ ಸ್ಮೃತಿ ಇರಾನಿ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಳೆದ 5 ವರ್ಷಗಳಲ್ಲಿ ಗಮನ ನೀಡಿಲ್ಲ. ಅಮೇಥಿಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಬಂಧವನ್ನ ಮುಂದುವರೆಸಿಕೊಂಡು ಹೋಗಬೇಕಿದೆ. ಅಲ್ಲದೇ ಕ್ಷೇತ್ರದ ಜನರು ಸಹ ನಾನು ಸ್ಪರ್ಧೆ ಮಾಡಬೇಕೆಂದು ಬಯಸಿದ್ದಾರೆ. ಅಮೇಥಿಯಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟರೆ ಖಂಡಿತ ಸ್ಪರ್ಧೆ ಮಾಡುತ್ತೇನೆ ಅಂತ ರಾಬರ್ಟ್ ವಾದ್ರಾ ತಿಳಿಸಿದ್ದಾರೆ.