ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ ಬೆಳಗಾವಿ ಲೋಕಸಭಾ ಅಖಾಡ ನಿಧಾನಕ್ಕೆ ಕಾವೇರುತ್ತಿದೆ. ಅದರಲ್ಲೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ, ಮೃಣಾಲ್ ಹೆಬ್ಬಾಳ್ಕರ್ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಪುತ್ರನನ್ನ ಗೆಲ್ಲಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸುವ ಹೊಣೆಗಾರಿಕೆ ಹೆಬ್ಬಾಳ್ಕರ್ ಹೆಗಲ ಮೇಲಿದೆ. ಹೀಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರಾದ್ಯಂತ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್. ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೊರಗಿನವರು ಎಂಬ ಭಾವನೆ ಜಿಲ್ಲೆಯ ಜನರಲ್ಲಿದೆ. ಶೆಟ್ಟರ್ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರು, ಶಾಸಕರು, ಕಾರ್ಯಕರ್ತರಲ್ಲೂ ಅಸಮಾಧಾನ ಮಡುಗಟ್ಟಿದೆ. ಈ ಮಧ್ಯೆ ಬಿಜೆಪಿ ಪ್ರಭಾವಿ ನಾಯಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಟಸ್ಥರಾಗಿರುವುದು ಕಾಂಗ್ರೆಸ್ ಪಾಲಿಗೆ ಶುಭ ಸೂಚಕವಾಗಿತ್ತು.
ಬಿಜೆಪಿಯ ಒಳಬೇಗುದಿಯನ್ನೇ ಅಸ್ತ್ರ ಮಾಡಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ಗೆಲ್ಲುವ ಸೂತ್ರ ಹೆಣೆದಿದ್ದರು. ಆದರೆ ಈಗ ಬೆಳಗಾವಿ ಸೀನ್ ಫುಲ್ ಚೇಂಜ್ ಆಗಿದ್ದು, ಬೆಳಗಾವಿ ಕಣಕ್ಕೆ ರಮೇಶ್ ಜಾರಕಿಹೊಳಿ ಸಡನ್ ಎಂಟ್ರಿ ಆಗಿದೆ. ಮುನಿಸು ಮರೆತಿರುವ ರಮೇಶ್ ಜಾರಕಿಹೊಳಿ, ಜಗದೀಶ್ ಶೆಟ್ಟರ್ ಪರವಾಗಿ ನಿಲ್ಲಲು ತೀರ್ಮಾನಿಸಿದ್ದಾರೆ. ಜಾರಕಿಹೊಳಿಯ ಈ ದಿಢೀರ್ ನಿರ್ಧಾರ ಕಾರಣ ಏನು ಅಂತ ನೋಡಿದಾಗ, ಒಂದು ವೇಳೆ ಮೃಣಾಲ್ ಚುನಾವಣೆಯಲ್ಲಿ ಗೆದ್ದು, ಸಂಸದಾಗಿ ಆಯ್ಕೆ ಆದರೆ, ಜಿಲ್ಲೆಯಲ್ಲಿ ಮತ್ತು ಕಾಂಗ್ರೆಸ್ ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಿಡಿತ ಮತ್ತಷ್ಟು ಹೆಚ್ಚಾಗಲಿದೆ ಎಂಬ ಆತಂಕ ರಮೇಶ್ ಜಾರಕಿಹೊಳಿಯನ್ನ ಕಾಡುತ್ತಿದೆ. ಇದೇ ಕಾರಣಕ್ಕಾಗಿ ಬಿಜೆಪಿಯಲ್ಲಿ ಎಷ್ಟೇ ಅಸಮಾಧಾನವಿದ್ದರೂ, ಬಿಜೆಪಿ ಪರ ಕೆಲಸ ಮಾಡಲು ಜಾರಕಿಹೊಳಿ ತೀರ್ಮಾನ ತೆಗೆದುಕೊಂಡಿದ್ದಾರೆ.