ಬೆಂಗಳೂರಿನ ನಗರತ್ ಪೇಟೆ ಪ್ರಕರಣದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕ್ಷುಲ್ಲಕ ವಿಚಾರಕ್ಕೆ ಮಧ್ಯರಾತ್ರಿ ಪಕ್ಕದ ಮನೆಯ ಗುಂಪು ನೆರೆಯ ಕುಟುಂಬವೊಂದರ ಮೇಲೆ ಹಲ್ಲೆ ನಡೆಸಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ. ಕುಮಾರಸ್ವಾಮಿ ಲೇಔಟ್ ನ ಪ್ರಗತಿಪರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ ಆಟೋ ಪಾರ್ಕಿಂಗ್ ವಿಚಾರಕ್ಕೆಗಲಾಟೆ ನಡೆದಿದೆ. ಬನಶಂಕರಿಯ ಪ್ರಗತಿಪರ ಬಡಾವಣೆಯಲ್ಲಿ ಆಟೋ ಪಾರ್ಕಿಂಗ್ ವಿಚಾರಕ್ಕೆ ಯುವಕರು ಮನೆಗೆ ನುಗ್ಗಿ 8 ಮಂದಿ ಮೇಲೆ ಗುಂಪು ಹಲ್ಲೆ ನಡೆಸಿದ್ದಾರೆ. ಪ್ರಗತಿಪರ ಬಡಾವಣೆಯ ಕಿರಿದಾದ ರಸ್ತೆಯಲ್ಲಿ ಶಿವಕುಮಾರ್ ಎಂಬುವರು ಮನೆ ಮುಂದೆ ಆಟೋ ಚಾಲಕನೊಬ್ಬ ಆಟೋ ಪಾರ್ಕ್ ಮಾಡ್ತಿದ್ದರು. ಇಲ್ಲಿ ಆಟೋ ನಿಲ್ಲಿಸಬೇಡಿ ಅಂದಿದ್ದಕ್ಕೆ ಮಾತಿನ ಚಕಮಕಿ ನಡೆಸಿದ ವ್ಯಕ್ತಿ ಯುವಕರನ್ನ ಕರೆತಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶಿವಕುಮಾರ್ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಮನೆಯಲ್ಲಿದ್ದ ಮಹಿಳೆಯರು, ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದು, ಶಿವಕುಮಾರ್ ಕುಟುಂಬಸ್ಥರಿಗೆ ಗಾಯಗಳಾಗಿವೆ.
ಹಲ್ಲೆ, ಗಲಾಟೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲ್ಲೆಯಲ್ಲಿ ಗಾಯಗೊಂಡಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ಗಲಾಟೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಮಿಂಚಿನ ವೇಗದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಎಂಟು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧ ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ, ಈ ಘಟನೆ ನಡೆದಿರುವುದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ. ಈ ಘಟನೆಯ ವಿಚಾರ ನಗರ ಪೊಲೀಸ್ ಆಯುಕ್ತ ದಯಾನಂದರ ಗಮನಕ್ಕೂ ತಂದಿದ್ದೇನೆ. “wakeup Hindus” ಎಂದು ಬರೆದುಕೊಂಡಿದ್ದರು. ಆದರೆ ನಂತರ ಪ್ರತಾಪ್ ಸಿಂಹ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ