ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನೋ ಹಾಗೆ ಕೋಲಾರ ಬಣ ಬಡಿದಾಟಕ್ಕೆ, ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಕೋಲಾರ ಲೋಕಸಭಾ ಟಿಕೆಟ್ ಸಚಿವ ಕೆ.ಹೆಚ್. ಮುನಿಯಪ್ಪ ಅಳಿಯನಿಗೆ ನೀಡಲು, ರಮೇಶ್ ಕುಮಾರ್ ಬಣದ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ರು. ರಾಜೀನಾಮೆ ನೀಡುವ ಹಂತಕ್ಕೂ ಹೋಗಿದ್ರು. ಹೀಗಾಗಿ ಪರ್ಯಾಯ ಸೂತ್ರ ಹೆಣೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎರಡೂ ಬಣಗಳಿಗೆ ಶಾಕ್ ನೀಡಲು ನಿರ್ಧರಿಸಿದ್ದಾರಂತೆ. ಉಭಯ ಬಣಗಳಿಗೂ ಸಂಬಂಧ ಪಡದ, ಮೂರನೇ ವ್ಯಕ್ತಿಗೆ ಮಣೆ ಹಾಕಲು ಖರ್ಗೆ ಚಿಂತನೆ ನಡೆಸಿದ್ದಾರೆ.
ಬೆಂಗಳೂರು ಕೇಂದ್ರದ ಅಧ್ಯಕ್ಷ ಹಾಗೂ ಬೆಂಗಳೂರು ಪಾಲಿಕೆಯ ಮಾಜಿ ಮೇಯರ್ ವಿಜಯ್ ಕುಮಾರ್ ಪುತ್ರ ಗೌತಮ್ಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ದಲಿತ ಎಡಗೈ ಸಮುದಾಯಕ್ಕೆ ಸೇರಿರುವ ಗೌತಮ್ಗೆ ಟಿಕೆಟ್ ನೀಡಿದ್ರೆ ಹೇಗೆ.? ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ, ಅಂತಿಮ ನಿರ್ಧಾರಕ್ಕೆ ಬನ್ನಿ ಅಂತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ಗೆ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಖರ್ಗೆಯವರ ಈ ನಿರ್ಧಾರದ ಬಗ್ಗೆ ಕಿಂಚಿತ್ತೂ ನಿರೀಕ್ಷಿಸದ ಎರಡು ಬಣಗಳು ಕೈಕೈ ಹಿಚುಕಿಕೊಳ್ಳುತ್ತಿದ್ದಾರೆ. ಈ ಮಧ್ಯೆ ರಮೇಶ್ ಕುಮಾರ್ ಬಣದ ಶಾಸಕರು, ಮುಖಂಡರ ಜೊತೆ ಸಭೆ ನಡೆಸಿದ ಸಿದ್ದರಾಮಯ್ಯ, ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಸಭೆಯಲ್ಲಿ ಖರ್ಗೆ ಸೂತ್ರದ ಬಗ್ಗೆ ಕೇಳಿದ ಸಿದ್ದರಾಮಯ್ಯಗೆ, ಮುನಿಯಪ್ಪ ಕುಟುಂಬಕ್ಕೆ ಬಿಟ್ಟು, ಬೇರೆ ಯಾರನ್ನೇ ಅಭ್ಯರ್ಥಿ ಮಾಡಿದ್ರು ತಕರಾರಿಲ್ಲ ಅಂತ ಹೇಳಿದ್ದಾರೆ. ಆದರೆ ಇತ್ತ ಸಚಿವ ಮುನಿಯಪ್ಪ ಮಾತ್ರ ತನ್ನ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವಂತೆ ಲಾಬಿ ಮುಂದುವರೆಸಿದ್ದಾರೆ.