ಉತ್ತರ ಕೊರಿಯಾ ತನ್ನ ವಿಭಿನ್ನ ನಡೆಗಳಿಂದ ಆಗಾಗ ಸುದ್ದಿಯಲ್ಲಿರುತ್ತದೆ. ಆದರೆ ಈ ಬಾರಿ ದಕ್ಷಿಣ ಕೊರಿಯಾಕ್ಕೆ ವಿಚಿತ್ರವಾಗಿ ಕೊಳಕು ಬಲೂನ್ ಮೂಲಕ ಕಿರುಕುಳ ನೀಡಿದ ಪ್ರಸಂಗದಿಂದ ಸುದ್ದಿಯಲ್ಲಿದೆ.
ಹೌದು .. ದಕ್ಷಿಣ ಕೊರಿಯಾದ 8 ಪ್ರಾಂತ್ಯಗಳಲ್ಲಿ ಸುಮಾರು 260 ಬಲೂನ್ಗಳು ಪತ್ತೆಯಾಗಿವೆ. ರಾಜಧಾನಿ ಸಿಯೋಲ್ ಮತ್ತು ದೇಶದ ಆಗ್ನೇಯ ಪ್ರಾಂತ್ಯದ ಜಿಯೊಂಗ್ಸಾಂಗ್ನಲ್ಲಿಯೂ ಬಲೂನ್ಗಳು ಬಿದ್ದಿವೆ. ಈ ಬಲೂನ್ಗಳು ಸಂಪೂರ್ಣವಾಗಿ ಕೊಳಕಿನಿಂದ ತುಂಬಿವೆ. ಆದ್ದರಿಂದ ದಕ್ಷಿಣ ಕೊರಿಯಾದ ಅಧಿಕಾರಿಗಳು ಮನೆಯೊಳಗೆ ಇರುವಂತೆ ಜನರಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಬಲೂನ್ಗಳ ಹತ್ತಿರ ಹೋಗಬೇಡಿ ಹಾಗೂ ಅವುಗಳನ್ನು ಮುಟ್ಟಬೇಡಿ ಎಂಬುದಾಗಿ ಸೂಚನೆ ನೀಡಿದ್ದಾರೆ.
ಬಲೂನ್ಗಳೊಂದಿಗೆ ಬಂದಿರುವ ಕಸದಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು, ಹಾಳಾದ ಶೂಗಳ ಭಾಗಗಳು ಮತ್ತು ಮಣ್ಣು ಸೇರಿವೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿಯ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ. ಸೇನೆಯು ಪ್ರಸ್ತುತ ಈ ಬಲೂನ್ಗಳ ಬಗ್ಗೆ ತನಿಖೆ ನಡೆಸುತ್ತಿದೆ. ಉತ್ತರ ಕೊರಿಯಾದ ಈ ಕ್ರಮದಿಂದ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ. ಇದೊಂದು ಬೆದರಿಕೆಯಾಗಿದ್ದು, ಇಂತಹ ಅಮಾನವೀಯ ಕ್ರಮಗಳನ್ನು ಕೂಡಲೇ ನಿಲ್ಲಿಸುವಂತೆ ದಕ್ಷಿಣ ಕೊರಿಯಾದ ಸೇನೆಯು ಉತ್ತರ ಕೊರಿಯಾಕ್ಕೆ ಎಚ್ಚರಿಕೆ ನೀಡಿದೆ.