ಬಿಜೆಪಿ-ಜೆಡಿಎಸ್ ಮೈತ್ರಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾಗುತ್ತೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿಯ ಸಭೆ ನಡೆಯಿತ್ತು. ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿ ಅನೇಕ ನಾಯಕರು ಭಾಗಿಯಾಗಿದರು. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಮ್ಮಿಲನದಿಂದ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡತಕ್ಕ ಫಲಿತಾಂಶವನ್ನು ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, 2006ರಲ್ಲಿ ಸಹ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ಆಗಿತ್ತು. ಆದರೆ, ಸೈದ್ಧಾಂತಿಕ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಜೀ ಅವರ ಸಮ್ಮತಿ ಇರಲಿಲ್ಲ ಎಂದು ನೆನಪಿಸಿದರು. ಪಧಾನಿ ನರೇಂದ್ರ ಮೋದಿ ಜೀ ಅವರ ಜೊತೆಜೊತೆಗೇ ಮಾನ್ಯ ದೇವೇಗೌಡ ಜೀ ಅವರೂ ಈ ಬಾರಿ ಸಮ್ಮಿಲನಕ್ಕೆ ಆಶೀರ್ವಾದ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೀ ಅವರು ಈ ದೇಶದ ಅಭಿವೃದ್ಧಿ, ಭದ್ರತೆ ದೃಷ್ಟಿಯಿಂದ ನಮಗೆ ಆಶೀರ್ವಾದ ಮಾಡಿದ್ದು, ಇದರಿಂದ ಆನೆ ಬಲ ಬಂದಂತಾಗಿದೆ. ರಾಜ್ಯಕ್ಕೂ ಮುಂದಿನ ದಿನಗಳಲ್ಲಿ ಒಳಿತಾಗಲಿದೆ ಎಂದು ವಿಶ್ವಾಸದಿಂದ ನುಡಿದರು.
2018ರಲ್ಲೇ ಮೈತ್ರಿ ಆಗಿದ್ರೆ ನಮ್ಮ ಸರ್ಕಾರವೇ ಇರುತ್ತಿತ್ತು- ಹೆಚ್.ಡಿ. ಕುಮಾರಸ್ವಾಮಿ
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಅದರಂತೆ ಮೂರು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಜೆಪಿ ಬಿಟ್ಟುಕೊಟ್ಟಿದ್ದು, ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಜೆಡಿಎಸ್ ಬೆಂಬಲಿಸಲಿದೆ. ಆದರೆ, ಈ ಮೈತ್ರಿಯು ತಾತ್ಕಾಲಿಕವಲ್ಲ ಎಂದು ಹೇಳಿರುವ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ಮೈತ್ರಿ ನಾಯಕರು ಭದ್ರ ಬುನಾದಿ ಹಾಕಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಅಸಾಧ್ಯ ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಮೂರನೇ ಬಾರಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಎಷ್ಟು ಸತ್ಯವೋ, ಸೂರ್ಯ ಚಂದ್ರ ಹುಟ್ಟುವುದು ಅಷ್ಟೇ ಸತ್ಯ. ಬೂತ್ ಮಟ್ಟ, ಜಿಲ್ಲಾ ಮಟ್ಟದಲ್ಲಿ ಪರಸ್ಪರ ಸಂಶಯಕ್ಕೆ ಒಳಗಾಗದೇ ಕೆಲಸ ಮಾಡಬೇಕು. ಮೈತ್ರಿ ನಾಯಕರು ಭದ್ರ ಬುನಾದಿ ಹಾಕಿದರೆ ಕಾಂಗ್ರೆಸ್ ಬರಲು ಸಾಧ್ಯವಿಲ್ಲ ಎಂದರು.