ಬಿಜೆಪಿ ಸರಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು. ಕರ್ನಾಟಕದ ಬೂತ್ ಕಾರ್ಯಕರ್ತರ ಜೊತೆ ನಮೋ ಆ್ಯಪ್ ಮೂಲಕ ಸಂವಾದ ನಡೆಸಿದ ಅವರು, 2-3 ಜನರ ಗುಂಪು ರಚಿಸಿ ಕುಳಿತು ಮಾತನಾಡಿ, ಮತದಾನ ಖಚಿತಪಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಸಾಧನೆಗಳನ್ನು ನಿರ್ದಿಷ್ಟ ಮನೆಗಳಿಗೆ ತಲುಪಿಸುವ ಕಡೆ ಗಮನ ಕೊಡಿ ಎಂದು ವಿನಂತಿಸಿದರು. ಸಾಧನೆ, ಕೆಲಸಗಳ ಕುರಿತು ಮಾತನಾಡಿ, ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ತಿಳಿಸಬೇಕು. ಅವರ ಭ್ರಷ್ಟಾಚಾರಗಳನ್ನು ಅನಾವರಣಗೊಳಿಸಿ ಎಂದೂ ತಿಳಿಸಿದರು. ಪ್ರಯೋಜನಾರ್ಥಿಗಳ ಜೊತೆ ಮಾತನಾಡಲು ಯುವಜನರ ಜೊತೆ ಯುವಜನರನ್ನೇ ನಿಯೋಜಿಸಿ. ಹಿರಿಯರ ಜೊತೆ ಹಿರಿಯರೇ ಮಾತನಾಡುವಂತಿರಲಿ. ಲಾಭಾರ್ಥಿಗಳಿಗೆ ಆದ ಲಾಭವನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡೋಣ. ಡೈರಿಯಲ್ಲಿ ಇದನ್ನು ಬರೆದುಕೊಳ್ಳಿ. ಮತದಾರರ ಮನ ಗೆಲ್ಲೋಣ. ಮತದಾರರ ಹೃದಯ ಗೆಲ್ಲುವುದು, ಕುಟುಂಬದ ಮನ ಗೆಲ್ಲುವುದು, ಬೂತ್ನ ಎಲ್ಲರ ಮನ ಗೆದ್ದು ಬಿಜೆಪಿಗೆ ಮತ ಕೊಡುವಂತೆ ಮಾಡುವ ಸವಾಲನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಇದ್ದು, ಪ್ರತಿ ಬೂತ್ನಲ್ಲೂ ಎರಡೂ ಪಕ್ಷಗಳ ಸಮನ್ವಯ ಸಭೆ ನಡೆಸಬೇಕು; ಇದು ಗೆಲುವಿನ ಕಡೆ ನಮ್ಮನ್ನು ಕರೆದೊಯ್ಯಲಿದೆ ಎಂದು ತಿಳಿಸಿದರು.
ನಾವು ಆಡಳಿತದಲ್ಲಿ ಇಲ್ಲದಿದ್ದರೂ ನಾವು ಭೇದಭಾವ ಮಾಡಿಲ್ಲ. ಇದನ್ನು ಜನರಿಗೆ ತಿಳಿಸೋಣ ಎಂದು ಹೇಳಿದರು. ಇದೇ ವೇಳೆ ಪ್ರಧಾನಿಯವರು ಕಾರ್ಯಕರ್ತರು ಜನರನ್ನು ಭೇಟಿ ಮಾಡುವ ಕಾರ್ಯ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಸಾಧನೆಗಳನ್ನು ತಿಳಿಸುವ ಕಾರ್ಯ ನಡೆದಿದೆಯೇ ಎಂದು ಕೇಳಿ ಉತ್ತರ ಪಡೆದರು. ಬಿಜೆಪಿ ಸರಕಾರದ ಯಾವ ಕೆಲಸ ಹೆಚ್ಚು ಇಷ್ಟವಾಗಿದೆ ಎಂದು ಕೇಳಿದರು. ರಾಮಮಂದಿರದ ವಿಚಾರ ಎಷ್ಟು ಪ್ರಭಾವ ಬೀರಬಹುದು ಎಂದೂ ಪ್ರಶ್ನೆಯನ್ನು ಮುಂದಿಟ್ಟು ಉತ್ತರ ಪಡೆದರು. ಮಹಿಳಾ ಶಕ್ತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡುವಂತೆ ನೋಡಿಕೊಳ್ಳಿ. ಮತದಾನ ಮಾಡುವುದು ಹೇಗೆ ಎಂದು ಜಾಗೃತಿ ಮೂಡಿಸಿ ಎಂದು ಸಲಹೆ ಕೊಟ್ಟಿದ್ದಾರೆ. ಬಿಜೆಪಿ ಸರಕಾರವು ಕಳೆದ 10 ವರ್ಷಗಳಲ್ಲಿ ನಾರಿ ಶಕ್ತಿಯ ಬಲವರ್ಧನೆ ಮಾಡಿದೆ. ‘ನಾರಿ ಶಕ್ತಿ ವಂದನಾ’ ರಾಜಕೀಯವಾಗಿ ಮಹಿಳಾ ಬಲವರ್ಧನೆ ಮಾಡಲಿದೆ ಎಂದೂ ತಿಳಿಸಿದರು. ಮಹಿಳೆಯರ ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ ಎಂದೂ ಅವರು ತಿಳಿಸಿದರು. ಬೂತ್ ಕಾರ್ಯಕರ್ತರು ತಮ್ಮ ಕಾರ್ಯದ ಅವಲೋಕನ ಮಾಡಲು ಪ್ರತಿದಿನದ ಕೆಲಸ ಮುಗಿದ ಬಳಿಕ ಸೇರಬೇಕು. ಮತಗಳ ಪ್ರಮಾಣ ಹೆಚ್ಚಾಗುತ್ತಿದೆಯೇ ಎಂದು ಅನಿಸಿಕೆಗಳನ್ನು ಹಂಚಿಕೊಳ್ಳಬೇಕಿದೆ ಎಂದೂ ತಿಳಿಸಿದರು.