ಭದ್ರಕೋಟೆಯಲ್ಲಿ ಗೆಲುವು ಸುಲಭ ಎಂದುಕೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಟೆನ್ಶನ್ ಶುರುವಾಗಿದೆ. ಮೊದಲಿನಿಂದಲೂ ವಲಸಿಗ ಎಂಬ ಹಣೆಪ್ಟಟಿ ಹೊಂದಿರುವ ಶೆಟ್ಟೆರ್ ಗೆ ಈಗ ಸಂಕಟ ಶುರುವಾಗಿದೆ, ಬಿಜೆಪಿ ಮುಂಡರೇ ಬಂಡಾಯ ಅಭ್ಯರ್ಥಿ ಆಗಿ ಕಣಕ್ಕೆ ಇಳಿದಿದ್ದಾರೆ. ಹೌದು ಬೆಳಗಾವಿ ಜಿಲ್ಲೆ ಬಿಜೆಪಿ ಯುವ ನಾಯಕ ಮಹಂತೇಶ್ ವಕ್ಕುಂದ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಮಹಂತೇಶ್ ವಕ್ಕುಂದ,
“ಇದು ಬೆಳಗಾವಿಗರ ಸ್ವಾಭಿಮಾನದ ಹೋರಾಟ. ಮೋದಿ ಹಾಗೂ ಬಿಜೆಪಿ ಬೆಂಬಲಿಸುವ ಬೆಳಗಾವಿ ಮತದಾರರ ಮೇಲೆ ಹೊರಗಿನ ಅವಕಾಶವಾದಿಗಳನ್ನು ಒತ್ತಾಯ ಪೂರ್ವಕವಾಗಿ ಹೇರಿ ನಮ್ಮತನವನ್ನು ಬಲಿ ಕೊಡುತ್ತಿರುವವರ ವಿರುದ್ಧ ಹೋರಾಟ.
ಮೋದಿಯವರ ಹೆಸರು ಹೇಳಿಕೊಂಡು ಬೇಕಾ ಬಿಟ್ಟಿಯಾಗಿ ಬಂದು ಉಂಡು ಹೋಗುವ ಧರ್ಮಛತ್ರವಲ್ಲ ನಮ್ಮ ಬೆಳಗಾವಿ. ಇದೊಂದು ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದ ಸ್ವಾಭಿಮಾನದ ನೆಲ. ಆ ಸ್ವಾಭಿಮಾನಕ್ಕೆ ಧಕ್ಕೆ ಬರಕೂಡದು.
ಬಿಜೆಪಿಯ ಬೆಂಬಲಿಗರಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದ ನಮ್ಮ ಮೇಲೆ, ಈ ಕ್ಷೇತ್ರದ ಜನರ ಮೇಲೆ, ನಮ್ಮ ವಿಶ್ವಾಸ ಮುರಿದು ಬಿಜೆಪಿಯಿಂದ ಎಲ್ಲ ಅಧಿಕಾರ ಅನುಭವಿಸಿದ ಮೇಲೂ ಕೇವಲ ತನ್ನ ಸ್ವಾರ್ಥಕ್ಕಾಗಿ ಪಕ್ಷ ತೊರೆದು, ಮೋದಿಯವರನ್ನೇ ಹೀಯಾಳಿಸಿ, ಕೊನೆಗೆ ಒಬ್ಬ ಕಾರ್ಯಕರ್ತನ ವಿರುದ್ಧ ಸೋತು, ಈಗ ಬಿಜೆಪಿಗೆ ಮರಳಿ ಬೆಳಗಾವಿ ರಾಜಕಾರಣದಲ್ಲೂ ಕೈಯಾಡಿಸಿ ಎಲ್ಲವೂ ನಮಗೆ ಇರಲಿ ಎಂದು ಬಯಸಿ ಬರುತ್ತಿರುವ ಸ್ವಾರ್ಥಿಗಳನ್ನು ರತ್ನಗಂಬಳಿ ಹಾಕಿ ಸ್ವಾಗತಿಸಬೇಕೆ ?
ಬನ್ನಿ ಈ ಅನ್ಯಾಯದ ವಿರುದ್ಧ ತೊಡೆತಟ್ಟೋಣ.
ಸಮಾನ ಮನಸ್ಕರು, ನಮ್ಮ ಬೆಂಬಲಿಗರು, ಸ್ಥಳೀಯ ನಾಯಕತ್ವ ಬಯಸಿ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವ ಬೆಳಗಾವಿಯ ಎಲ್ಲ ಮೋದಿ ಮತದಾರರು ಇದೇ ಶನಿವಾರ/ಭಾನುವಾರ ಬೆಳಗಾವಿಯಲ್ಲಿ ಸೇರೋಣ. ಗಟ್ಟಿಯಾದ ನಿರ್ಧಾರ ಮಾಡಿ ನಮ್ಮೂರಿನ ನ್ಯಾಯಕ್ಕಾಗಿ ನಾವೇ ಅಖಾಡಕ್ಕಿಳಿಯೋಣ.
ನಮ್ಮ ಮೋದಿಗೆ, ನಮ್ಮದೇ ಅಭ್ಯರ್ಥಿ”
ಅಂತ ಬರೆದುಕೊಂಡಿದ್ದಾರೆ. ಹೀಗಾಗಿ ಧಾರವಾಡದಿಂದ ಬೆಳಗಾವಿಗೆ ಹಾರಿರುವ ಶೆಟ್ಟರ್ ಸಾಹೇಬರಿಗೆ ಸವಾಲು ದಿನದಿಂದ ದಿನಕ್ಕೆ ಮತ್ತಷ್ಟು ಕಠಿಣ ಆಗುತ್ತಿರುವುದು ಸ್ಪಷ್ಟ.