ಅಮೆರಿಕ ಅಧ್ಯಕ್ಷರಿಗಿಂತ ಹೆಚ್ಚು; ಭಾರತ- ಪಾಕ್ ಪಂದ್ಯಕ್ಕೆ ಭದ್ರತೆ
ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಯೋತ್ಪಾದಕ ದಾಳಿಯ ಬೆದರಿಕೆಯ ಕುರಿತು ನಸ್ಸೌ ಕೌಂಟಿಯ ಕಾರ್ಯನಿರ್ವಾಹಕ ಬ್ರೂಸ್ ಬ್ಲೇಕ್ಮ್ಯಾನ್ ಮಾತನಾಡಿದ್ದು, ‘ಇದರಲ್ಲಿ ಅನಿರೀಕ್ಷಿತ ಏನೂ ಇಲ್ಲ. ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯ ನಡೆದಾಗ ಈ ರೀತಿಯ ಬೆದರಿಕೆಗಳು ಬರುವುದು ಸಹಜ. ಹೀಗಾಗಿ ಎಲ್ಲರನ್ನೂ ಸುರಕ್ಷಿತವಾಗಿರಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
2024 ರ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಇಷ್ಟು ದಿನ ಕಾದು ಕುಳಿತಿದ್ದ ಸಮಯ ಬಂದಿದೆ. ನಾಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಉಭಯ ತಂಡಗಳ ಕಾಳಗ ನಡೆದಾಗ ಭಯೋತ್ಪಾದಕ ದಾಳಿ ನಡೆಯುವ ಬಗ್ಗೆ ಎಚ್ಚರಿಕೆಯ ಸಂದೇಶಗಳು ಬರುವುದು ಸಹಜ. ಅದರಂತೆ ಈ ಪಂದ್ಯಕ್ಕೂ ಅದೇ ರೀತಿಯ ಬೆದರಿಕೆ ಒಡ್ಡಲಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಎರಡು ತಂಡಗಳ ಕ್ರಿಕೆಟಿಗರಿಗೆ ಸಂಪೂರ್ಣ ಭದ್ರತೆ ನೀಡಲು ಅಮೆರಿಕ ಅಧಿಕಾರಿಗಳು ಪೂರ್ಣ ಸಜ್ಜಾಗಿದ್ದಾರೆ. ಅಲ್ಲದೆ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ಪಾಕ್ ಪಂದ್ಯವನ್ನು ಸುರಕ್ಷಿತವಾಗಿ ಆಯೋಜಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಸ್ಸೌ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಮೆರಾ ಕಣ್ಗಾವಲು..
ನಸ್ಸೌ ಕೌಂಟಿ ಪೊಲೀಸ್ ಕಮಿಷನರ್ ಪ್ಯಾಟ್ರಿಕ್ ರೈಡರ್ ಮಾತನಾಡಿ, ನಗರದ ಸುತ್ತಲೂ ವಿಶೇಷ ಕಣ್ಗಾವಲು ಒದಗಿಸಲು ಗಸ್ತುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕ್ರೀಡಾಂಗಣಕ್ಕೆ ಹೋಗುವ ಎಲ್ಲಾ ರಸ್ತೆಗಳಲ್ಲಿ ಮತ್ತು ಕ್ರೀಡಾಂಗಣದ ಮೂಲೆ ಮೂಲೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಯಾವುದೇ ಅನುಮಾನಾಸ್ಪದ ಸನ್ನಿವೇಶ ಕಂಡುಬಂದಲ್ಲಿ ಪೊಲೀಸರು ಕ್ರಮ ಕೈಗೊಳ್ಳಲ್ಲಿದ್ದಾರೆ ಎಂದರು.