ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದೆ. ರಾಜ್ಯದಿಂದ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ಗುರಿ ಹೊಂದಿರುವ ಕಾಂಗ್ರೆಸ್ ಗೆ, ಹಲವು ಕ್ಷೇತ್ರಗಳಲ್ಲಿ ಬಣ ಬಡಿದಾಟವೇ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿದೆ.
ಮೊದಲೆ ರಣರಣ ಅಂತಿರುವ ಕೋಲಾರದಲ್ಲಿ, ಈಗ ಮತ್ತೆ ಬಣ ರಾಜಕೀಯ ತಾರಕಕ್ಕೇರಿದೆ. ಸಚಿವ ಕೆಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಣ ತಿಕ್ಕಾಟ ಜೋರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವಂತೆ ಮುನಿಯಪ್ಪ ಪಟ್ಟು ಹಿಡಿದಿದ್ದರೆ, ಅವರಿಗೆ ಟಿಕೆಟ್ ನೀಡಿದರೆ ಕೆಲಸವೇ ಮಾಡಲ್ಲ ಎಂದು ರಮೇಶ್ ಕುಮಾರ್ ದಾಳ ಉರುಳಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಅಳಿಯ ಚಿಕ್ಕಪೆದ್ದಣ್ಣಗೆ ನೀಡುವಂತೆ ಮುನಿಯಪ್ಪ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ. ಇಷ್ಟೇ ಅಲ್ಲದೆ, ಹೈಕಮಾಂಡ್ ನಾಯಕರಿಗೂ ಈಗಾಗಲೇ ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಓಕೆ ಎಂದರೆ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕಪೆದ್ದಣ್ಣ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.
ಕೋಲಾರದಲ್ಲಿ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕೊಡುವ ತೀರ್ಮಾನವನ್ನು ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಬಣ ತೀವ್ರವಾಗಿ ವಿರೋಧಿಸಿದೆ. ರಮೇಶ್ ಕುಮಾರ್ ಬಣ ಎಲ್ ಹನುಮಂತಯ್ಯ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಅಂತ ತಿಳಿದು ಬಂದಿದೆ