ಬೆಂಗಳೂರು ಗ್ರಾಮಾಂತರ ಜನರ ಸೇವೆ ಮಾಡುತ್ತಿರುವುದು ದೆಹಲಿ ಜನ ಅಲ್ಲ ಎಂದಿದ್ದ ಡಿಕೆ ಶಿವಕುಮಾರ್ ಗೆ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಯಾವ ಸೇವೆಯ ಬಗ್ಗೆ ಅವರು ಮಾತಾಡುತ್ತಾರೆ..? ಬೆಂಗಳೂರಲ್ಲಿ ಪ್ಲ್ಯಾನ್ ಅಪ್ರೂವಲ್ ಗೆ ಒಂದು ಚದರ ಅಡಿಗೆ 100 ಹೆಚ್ಚಿಸಿರುವುದು ಸೇವೆನಾ..? ಜನರನ್ನು ಹೆದರಿಸಿ ಬೆದರಿಸಿ ಅವರಲ್ಲಿ ಭಯ ಹುಟ್ಟಿಸುವುದು ಸೇವೆನಾ.? ಅವರು ಮಾತ್ರ ಸೇವೆ ಮಾಡುತ್ತಾರಾ.. ಉಳಿದವರು ನಿದ್ರೆ ಮಾಡುತ್ತಾರಾ? ಡಿಕೆ ಸುರೇಶ್ ಸಂಸತ್ ಸದಸ್ಯನಾಗಿ ಅಲ್ಲ, ಒಂದು ಪಂಚಾಯಿತಿ ಸದಸ್ಯನಂತೆ ಕೆಲಸ ಮಾಡುತ್ತಾರೆ ಅಂತ ಶಿವಕುಮಾರ್ ಹೇಳಿರುವುದನ್ನು ಗೇಲಿ ಮಾಡಿದ ಕುಮಾರಸ್ವಾಮಿ, ಅವರೇ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡುವ ಹಾಗಿದ್ದರೆ ಪಂಚಾಯಿತಿಗಳು ಮತ್ತು ಸದಸ್ಯರು ಯಾಕೆ ಬೇಕು? ಅಂತ ಪ್ರಶ್ನಿಸಿದರು. ಡಿಕೆ ಸಹೋದರರು ಆಡುವ ಮಾತಿಗೆ ಮತ್ತು ನಡವಳಿಕೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ, ಅವರು ಹೇಳಿದ್ದನ್ನು ನಂಬುವ ಅವಶ್ಯಕತೆಯಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.