ಈ ಬಾರಿ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಅದ್ಯಾಕೋ ಸಪ್ಪೆ ಪ್ರದರ್ಶನ ನೀಡುತ್ತಿದೆ. ಮುಂಬೈ ಇಂಡಿಯನ್ಸ್ ತಂಡವು ಹ್ಯಾಟ್ರಿಕ್ ಸೋಲು ಕಂಡಿದ್ದು ಫ್ಯಾನ್ಸ್ ಗೂ ನಿರಾಸೆ ತಂದಿದೆ. ಹೊಸ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ತವರು ನೆಲ ಮುಂಬೈಯಲ್ಲೂ ಮೊದಲ ಗೆಲುವು ಕಾಣಲು ಎಂಐ ವಿಫಲವಾಗಿತ್ತು. ಸೋಮವಾರ ವಾಂಖೆಡೆ ಮೈದಾನದಲ್ಲಿ ನಡೆದ 14ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಭರ್ಜರಿ 6 ವಿಕೆಟ್ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ಸಂಜು ಸ್ಯಾಮ್ಸನ್ ಬಳಗವು ಹ್ಯಾಟ್ರಿಕ್ ಗೆಲುವಿನೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನಕ್ಕೇರಿದೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭ ಕಳಪೆಯಾಗಿತ್ತು. ಪವರ್ ಪ್ಲೇನಲ್ಲಿ ಸಾಮಾನ್ಯವಾಗಿ ರನ್ ಸುರಿಮಳೆ ಆಗುತ್ತದೆ. ಆದರೆ ವಾಂಖೆಡೆಯಲ್ಲಿ ಪಟಪಟನೆ ವಿಕೆಟ್ಗಳು ಬಿದ್ದವು.
ಮುಂಬೈ ಇಂಡಿಯನ್ಸ್ ತಂಡದ ಟಾಪ್ ಮೂರು ಆಟಗಾರರಾದ ರೋಹಿತ್ ಶರ್ಮಾ, ನಮನ್ ಧೀರ್, ಡೆವಾಲ್ಡ್ ಬ್ರೆವಿಸ್ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ಗೆ ಸೇರಿದರು. ಗೆಲ್ಲಲು ಕೇವಲ 126 ರನ್ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಓವರ್ನಲ್ಲೇ ಜೈಸ್ವಾಲ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಜೈಸ್ವಾಲ್ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಸಂಜು ಸ್ಯಾಮ್ಸನ್ 12 ರನ್ ಬಾರಿಸಿ ಆಕಾಶ್ ಮಧ್ವಾಲ್ಗೆ ವಿಕೆಟ್ ಒಪ್ಪಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರಿಯಾನ್ ಪರಾಗ್ ಕೇವಲ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 54 ರನ್ ಗಳಿಸಿದರು. ಸತತ ಎರಡು ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ ತಂಡದ ಪ್ರಮುಖ ಮೂರು ವಿಕೆಟ್ ಕಬಳಿಸಿದ ಟ್ರೆಂಟ್ ಬೋಲ್ಟ್ ಮ್ಯಾಚ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡದರು.