ಸತತ 20 ಗಂಟೆಗಳ ಕಾರ್ಯಾಚರಣೆ ಕೊನೆಗೂ ಯಶಸ್ವಿ ಆಗಿದೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳು ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ನನ್ನು ಸುರಕ್ಷಿತವಾಗಿ ಹೊರ ತಂದಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಘಟನೆ ನಡೆದಿದ್ದು, ಮನೆ ಬಳಿ ಆಟವಾಡುತ್ತಿದ್ದ 2 ವರ್ಷದ ಮಗು ಸಾತ್ವಿಕ್ ಆಕಸ್ಮಿಕವಾಗಿ 16 ಅಡಿಯ ಕೊಳವೆ ಬಾವಿಗೆ ಬಿದ್ದಿದ್ದ. ನಿನ್ನೆ ಸಂಜೆಯಿಂದ ಮಗು ರಕ್ಷಣೆಗಾಗಿ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅಂತಿಮವಾಗಿ ಮಗುವನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ.
2 ದಿನಗಳ ಹಿಂದೆ ಕೊರೆಸಿದ್ದ ತೆರೆದ ಕೊಳವೆಬಾವಿಗೆ ಬಿದ್ದ ಸಾತ್ವಿಕ್ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಅಗ್ನಿ ಶಾಮಕ ಮತ್ತು ಪೊಲೀಸರು ಸತತವಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮಧ್ಯಾಹ್ನ 1.44ಕ್ಕೆ ಮಗುವನ್ನು ಜೀವಂತವಾಗಿ ಹೊರ ತೆಗೆಯಲಾಯಿತು. ಸಾತ್ವಿಕ್ ನನ್ನ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ತಂದೆ-ತಾಯಿ ಸೇರಿ ಕನ್ನಡಿಗರ ಪ್ರಾರ್ಥನೆ ಫಲಿಸಿದೆ. ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಮುಜಗೊಂಡ ಬಾಲಕನು ಬುಧವಾರ ಆಟವಾಡಲು ಹೋಗಿದ್ದ. ಸಂಜೆ 5.30ರ ಸುಮಾರಿಗೆ ಆತ ಕೊಳವೆಬಾವಿಗೆ ಬಿದ್ದಿದ್ದ. ಸಂಜೆ 6 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿತ್ತು. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳು ಸತತವಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.