ಕದನ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಹೆಚ್.ಡಿ. ಕುಮಾರಸ್ವಾಮಿ, ಇಂದು ದಿಢೀರ್ ಅಂತ ಸಂಸದೆ ಸುಮಲತಾ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಭಾರಿ ನಿರಾಸೆಯಾಗಿದ್ದು, ಅಸಮಾಧಾನಗೊಂಡಿದ್ದಾರೆ. ಈಗಾಗಲೇ ಬೆಂಬಲಿಗರೊಂದಿಗೆ ಒಂದು ಸುತ್ತಿನ ಸಭೆ ನಡೆಸಿರುವ ಸುಮಲತಾ, ಏಪ್ರಿಲ್ 3ಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಸಿ, ಅಂದೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಕಳೆದ ಬಾರಿ ಆದ ಪ್ರಮಾದವನ್ನ ಸರಿಪಡಿಸಿಕೊಳ್ಳಲು ಮುಂದಾಗಿರುವ ಕುಮಾರಸ್ವಾಮಿ, ಸುಮಲತಾರನ್ನ ಭೇಟಿಯಾಗುವ ಮೂಲಕ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ.