ಸೂರ್ಯನ ವಿಪರೀತ ಶಾಖದ ಅಲೆಯಿಂದ ಕರುನಾಡಿನಲ್ಲಿ ಕನಲಿ ಕೆಂಡದ ವಾತಾವರಣ ಸೃಷ್ಟಿ ಆಗಿದೆ. ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ, 12 ವರ್ಷಗಳಲ್ಲಿ ಮತ್ತೆ ಅತ್ಯಧಿಕ ದಾಖಲೆ ಮಟ್ಟದ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಧಿಕ ತಾಪಮಾನವೂ ಇದಾಗಿದೆ. ಉದ್ಯಾನನಗರಿ ಅಂತಲೇ ಕರೆಸಿಕೊಳ್ಳುವ ಬೆಂಗಳೂರು ಈ ಬೇಸಿಗೆಯಲ್ಲಿ ಬಯಲುಸೀಮೆಯ ಅನುಭವ ನೀಡುತ್ತಿರುವುದು ಸುಳ್ಳಲ್ಲ. ಏಪ್ರಿಲ್ ಆರಂಭದಲ್ಲೇ ಅಂದರೆ ಮಂಗಳವಾರ ಏಪ್ರೀಲ್ 2ರಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ 12 ವರ್ಷಗಳಲ್ಲಿಯೇ ನಾಲ್ಕನೇ ಬಾರಿಗೆ ದಾಖಲಾದ ಸಾರ್ವಕಾಲಿಕ ದಾಖಲೆಯ ತಾಪಮಾನವಾಗಿದೆ. ಏಪ್ರಿಲ್ ತಿಂಗಳಲ್ಲಿ ಈ ಹಿಂದಿನ ತಿಂಗಳಿಗಿoತಲೇ ಅತ್ಯಧಿಕ ತಾಪಮಾನ, ಬಿಸಿ ಗಾಳಿಯ ವಾತಾವರಣ ಉಂಟಾಗಲಿದೆ ಎಂಬ ಮುನ್ಸೂಚನೆ ಇದಾಗಿದೆ. ಏಪ್ರೀಲ್, ಮೇ ಮತ್ತು ಜೂನ್ ವರೆಗೆ ಬೆಂಗಳೂರಿನಲ್ಲಿ ಶಾಖದ ಅಲೆ ಹೀಗೆ ಮುಂದುವರಿಯಬಹುದು. ವಾಡಿಕೆ ಗರಿಷ್ಠ ತಾಪಮಾನಕ್ಕಿಂತಲೂ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚೇ ಉಷ್ಣಾಂಶ ಕಂಡು ಬರಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಉತ್ತರ ಕರ್ನಾಟಕವಂತೂ ಕಾದ ಬಾಣಲೆಯಂತಹ ವಾತಾವರಣವನ್ನು ಎದುರಿಸುತ್ತಿದೆ. ಕಲಬುರಗಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಸದ್ಯ ಎರಡು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ಗೂ ಅಧಿಕವಾಗಿದೆ.
ಈ ವಾರಾಂತ್ಯದೊಳಗೆ ಇನ್ನೂ ಕೆಲವು ಜಿಲ್ಲೆಗಳಲ್ಲೂ ಇಂತಹದೇ ವಾತಾವರಣ ಕಂಡುಬರಬಹುದು. ಬಿಸಿ ಗಾಳಿಯೂ ಬೀಸುವ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ.ಕಳೆದ ಒಂದು ತಿಂಗಳಿನಿoದಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚಾಗಿಯೇ ಇದೆ. ಆದರೆ 40 ಡಿಗ್ರಿ ಸೆಲ್ಸಿಯಸ್ ಒಳಗೆ ಬಿಸಿಲಿನ ಪ್ರಮಾಣ ಇತ್ತು. ಈಗ ಅದು 40 ಡಿಗ್ರಿ ಸೆಲ್ಸಿಯಸ್ ಕೂಡ ದಾಟಿದೆ. ಕಲಬುರಗಿಯಲ್ಲಿ ಅತ್ಯಧಿಕ ಅಂದರೆ 41.6 ಡಿಗ್ರಿ ಸೆಲ್ಸಿಯಸ್ ಸೋಮವಾರ ದಾಖಲಾಗಿದೆ. ಬಾಗಲಕೋಟೆಯಲ್ಲಿ 40.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಕಂಡು ಬಂದಿದೆ. ರಾಯಚೂರಿನಲ್ಲೂ 39.6 ಡಿಗ್ರಿ, ವಿಜಯಪುರದಲ್ಲಿ 39.5 ಡಿಗ್ರಿ ಹಾಗೂ ಕೊಪ್ಪಳದಲ್ಲಿ 39.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉತ್ತರ ಒಳನಾಡಿನ ಜತೆಯಲ್ಲಿ ದಕ್ಷಿಣ ಒಳನಾಡು, ಕರಾವಳಿಯಲ್ಲೂ ಕೂಡ ಉಷ್ಣಾಂಷ ಕೊಂಚ ಹೆಚ್ಚಳವಾಗಿದೆ.ಬೆಂಗಳೂರಿನಲ್ಲೂ ಏಪ್ರಿಲ್ 3 ಮತ್ತು 4ರಂದು ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಮಧ್ಯಾಹ್ನ ಇಲ್ಲವೇ ಸಂಜೆಯ ಹೊತ್ತಿಗ ಮುಖ್ಯವಾಗಿ ನಿರ್ಮಲವಾದ ಆಕಾಶದ ವಾತಾವರಣ ಇರಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಗರಿಷ್ಠ ಉಷ್ಣಾಂಶವು 36 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶವು 24 ಡಿಗ್ರಿ ಸೆಲ್ಸಿಯಸ್ನಷ್ಟು ಕಂಡು ಬರಲಿದೆ ಎಂದು ಭಾರತೀಯ ಹಮಾಮಾನ ಇಲಾಖೆಯು ತಿಳಿಸಿದೆ.
ಎಲ್ಲೆಲ್ಲಿ ಹೇಗಿದೆ ತಾಪಮಾನ.?
ಕಲಬುರಗಿ : 41.6 – 27.0
ಬಾಗಲಕೋಟೆ : 40.7 – 23.5
ವಿಜಯಪುರ : 39.5 – 24.0
ರಾಯಚೂರು : 39.6 – 24.0
ಕೊಪ್ಪಳ :39.2 – 24.6
ಗದಗ : 38.7 – 23.0
ಬೆಂಗಳೂರು : 35.1 – 24.5
ಮೈಸೂರು : 36.7 – 26.0
ಮಂಗಳೂರು : 35.4 – 26.2