ಕೊನೆಗೂ ತಮ್ಮ ನಿರ್ಧಾರ ಪ್ರಕಟಿಸಿರುವ ಸಂಸದೆ ಸುಮಲತಾ, ಮಂಡ್ಯ ರಣಕಣದಿಂದ ಹಿಂದೆ ಸರಿದಿದ್ದಾರೆ. ಮಂಡ್ಯದ ಕಾಳಿಕಾಂಬ ಸಮುದಾಯ ಭವನದಲ್ಲಿ ಮಾತನಾಡಿದ ಸುಮಲತಾ, ನಾನು ದ್ವೇಷ ಸಾಧಿಸಲು ಹೋಗುವುದಿಲ್ಲ. ಹಠಕ್ಕೆ ಬೀಳಲ್ಲ. ಮಂಡ್ಯದಲ್.ಲಿ ಬಿಜೆಪಿ ಉಳಿಯಬೇಕು. ಬಿಜೆಪಿ ಮತ್ತಷ್ಟು ಪ್ರಬಲವಾಗಿ ಸಂಘಟನೆ ಆಗಬೇಕು. ದೇಶಕ್ಕೆ ಪ್ರಧಾನಿ ಮೋದಿಯವರ ನಾಯಕತ್ವ ಬೇಕು. ಸಂಸದೆಯಾಗಿ ಮಂಡ್ಯದ ಋಣವನ್ನ ತೀರಿಸಿದ್ದೇನೆ. ಮಂಡ್ಯ ಜನತೆಗೆ ನನ್ನಿಂದ ಎಲ್ಲಾ ಕೆಲಸವನ್ನೂ ನನ್ನ ಶಕ್ತಿಮೀರಿ ಕೆಲಸ ಮಾಡಿದ್ದೀನಿ ಅಂತ ಹೇಳಿದರು. ಅಲ್ಲದೇ ಆಣೆ ಮಾಡಿ ಹೇಳುತ್ತೇನೆ ಯಾವುದೇ ಕಾರಣಕ್ಕೂ ಮಂಡ್ಯ ಜಿಲ್ಲೆಯನ್ನ ಬಿಡಲ್ಲ. ಈ ಚುನಾವಣೆಯಿಂದ ಮಾತ್ರ ಹಿಂದಕ್ಕೆ ಸರಿಯುತ್ತಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಜೊತೆಗೆ ಶೀಘ್ರವೇ ಬಿಜೆಪಿ ಸೇರುವುದಾಗಿ ಸುಮಲತಾ ಘೋಷಣೆ ಮಾಡಿದ್ದಾರೆ. ನಿರ್ಧಾರ ಘೋಷಣೆ ವೇಳೆ ಭಾವುಕರಾದ ಸುಮಲತಾ ತಮಗೂ, ಮಂಡ್ಯಕ್ಕೂ ಇರುವ ಸಂಬಂಧವನ್ನ ಬಿಚ್ಚಿಟ್ಟರು. ಅಂಬರೀಶ್ ಅವರನ್ನ ನೆನಸಿಕೊಂಡರು.