ಮೊನ್ನೆಯಷ್ಟೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದ ಸುಮಲತಾ ಅಂಬರೀಶ್, ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಸುಮಲತಾ ಅಂಬರೀಷ್ ಮಾತನಾಡಿ, ಬಿಜೆಪಿಯ ಹಿರಿಯರಿಂದ ಮಾರ್ಗದರ್ಶನ ಲಭಿಸಿದೆ. ಅದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದರು. ಅದೇ ನನಗೆ ಸ್ಫೂರ್ತಿ ಎಂದ ಅವರು, ಪ್ರಧಾನಿ ಮೋದಿಜೀ ಅವರ ನಾಯಕತ್ವ, ಪರಿಕಲ್ಪನೆ, ಅವರ ಕನಸುಗಳು, ಸಂಕಲ್ಪವು ಹೊಸ ಸ್ಫೂರ್ತಿ, ತಿಳುವಳಿಕೆಗೆ ಕಾರಣವಾಗಿದೆ ಎಂದು ಹೇಳಿದರು. ವಿಜಯೇಂದ್ರ ಮಾತನಾಡಿದ ದೇಶದ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ಸುಮಲತಾ ಅಂಬರೀಷ್ ಅವರು ಬಿಜೆಪಿ ಸೇರಿದ್ದಾರೆ. ಅವರಿಗೆ ಹೃತ್ಪೂರ್ವಕ ಸ್ವಾಗತ ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯಲ್ಲಿ ಅವರದೇ ಆದ ಪ್ರಭಾವ ಸುಮಲತಾ ಅವರಿಗೆ ಇದೆ ಎಂದು ಅಭಿಪ್ರಾಯಪಟ್ಟರು. ಇಡೀ ರಾಜ್ಯಕ್ಕೆ ಇದರಿಂದ ದೊಡ್ಡ ಶಕ್ತಿ ಲಭಿಸಿದಂತಾಗಿದೆ ಎಂದರು. ಕೊಪ್ಪಳದ ಮಾಜಿ ಸಂಸದ ಎಸ್.ಶಿವರಾಮೇಗೌಡ ಅವರಿಗೆ ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಪ್ರಭಾವ ಇದೆ ಎಂದರು.