ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಆದರೆ, ಚುನಾವಣೆ ಘೋಷಣೆಯಾದರೂ ಸೀಟು ಹಂಚಿಕೆ ಮಾತ್ರ ಅಂತಿಮವಾಗಿಲ್ಲ. ಈಗ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸೀಟು ಹಂಚಿಕೆ ಫೈನಲ್ ಆಗಿದ್ದು, ಜೆಡಿಎಸ್ಗೆ ನಿರೀಕ್ಷೆಯಂತೆ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದ್ದು, ಬಿಜೆಪಿ ಕೈಯಲ್ಲಿದ್ದ ಎರಡು ಹಾಲಿ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ. ಸುಮಲತಾ ಅಂಬರೀಶ್ ಅತಂತ್ರವಾಗಿದ್ದು, ರೆಬೆಲ್ ಸಂಸದೆಯ ನಿರ್ಧಾರದ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ.
ಈ ಬಗ್ಗೆ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ತಿಳಿಸಿದ್ದು, ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್ಗೆ ನೀಡಿಲು ನಿರ್ಧರಿಸಿದ್ದೇವೆ. ಈ ಮೂರು ಕ್ಷೇತ್ರಗಳಲ್ಲಿ ನಾವು ಜೆಡಿಎಸ್ಗೆ ಬೆಂಬಲ ನೀಡಲೇಬೇಕು ಎಂದು ತಿಳಿಸಿದ್ದಾರೆ. ಇದರಿಂದ ಹಾಸನ ಹಾಗೂ ಕೋಲಾರದಲ್ಲಿ ಜೆಡಿಎಸ್ಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಮುಖಂಡರಿಗೆ ಮೈತ್ರಿ ಧರ್ಮ ಪಾಲಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ