ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಕಳ್ಳತನ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಕ್ರೈಂಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಹೆದ್ದಾರಿಯಲ್ಲಿ ನಿಯಮ ಉಲ್ಲಂಘನೆ, ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಇದೀಗ ಪೊಲೀಸ್ ಇಲಾಖೆ ಸಜ್ಜಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಹೆದ್ದಾರಿ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ. ಟೋಲ್ ಹೆಚ್ಚಳ ವಿಚಾರಕ್ಕೆ ಈಗಾಗಲೇ ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕೆಂಡಕಾರುತ್ತಿದ್ದಾರೆ. ಅಷ್ಟೇ ಅಲ್ಲದೆ ಇದೀಗ ಈ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಹೆದ್ದಾರಿ ವೇನಲ್ಲಿ ಏಪ್ರಿಲ್ ಅಂತ್ಯಕ್ಕೆ ವಾಹನಗಳ ನೋಂದಣಿ ಫಲಕಗಳನ್ನು ಪತ್ತೆಹಚ್ಚಲು 60 ಸ್ವಯಂ ಚಾಲಿತ ಕ್ಯಾಮೆರಾಗಳು ಕಾರ್ಯನಿರ್ವಹಿಸಲಿವೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಲು ಪ್ರಯತ್ನ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಅತ್ಯಂತ ವೇಗವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ಕೆಲವೇ ಸ್ವಯಂ ಚಾಲಿತ ಕ್ಯಾಮೆರಾಗಳಿದ್ದು, ಅವುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಹೆದ್ದಾರಿ ಪ್ರಾಧಿಕಾರದಿಂದಲೂ 60 ಸ್ಥಳಗಳಲ್ಲಿ ಎ.ಎನ್.ಪಿ.ಆರ್ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಅಂತ ಪ್ರಾಧಿಕಾರದ ಬೆಂಗಳೂರು ವಿಭಾಗದ ಅಧಿಕಾರಿ ವಿಲಾಸ್ ಪಿ.ಬ್ರಹ್ಮಣಕರ್ ಮಾಹಿತಿ ನೀಡಿದ್ದಾರೆ.