ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಮಹಿಳಾ ಸಬಲೀಕರಣಕ್ಕೆ ಕಳೆದ 10 ವರ್ಷಗಳಲ್ಲಿ ಗರಿಷ್ಠ ಆದ್ಯತೆ ಕೊಟ್ಟಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ತಿಳಿಸಿದರು. ಬೆಂಗಳೂರಿನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾರತಿ ಶೆಟ್ಟಿ, ಶೇ 33ರಷ್ಟು ಮಹಿಳಾ ಮೀಸಲಾತಿ, ತ್ರಿವಳಿ ತಲಾಖ್ ರದ್ದು, ಮಹಿಳಾ ಅತ್ಯಾಚಾರ ಮಾಡಿದ ಅಪರಾಧಿಗೆ ಗಲ್ಲು ಶಿಕ್ಷೆ ಸೇರಿ ಅನೇಕ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಮಹಿಳಾ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕೊಡಲಾಗಿದೆ. ಶೇ 61 ಮಹಿಳೆಯರು ಆ ಯೋಜನೆಯ ಪ್ರತಿಫಲ ಪಡೆದಿದ್ದಾರೆ ಎಂದು ವಿವರಿಸಿದರು.ಶೇ 45 ಮಹಿಳೆಯರು ಸ್ಟಾಂಡ್ ಅಪ್ ಯೋಜನೆಯ ಲಾಭ ಪಡೆದಿದ್ದಾರೆ. ಜನ್ ಧನ್ ಯೋಜನೆಯಡಿ 2014ರ ಹಿಂದೆ ಯುಪಿಎ ಆಡಳಿತ ಇದ್ದಾಗ 10.3 ಕೋಟಿ ಬ್ಯಾಂಕ್ ಖಾತೆಗಳಿದ್ದವು. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕಳೆದ 10 ವರ್ಷಗಳಲ್ಲಿ 51.6 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ 28 ಕೋಟಿ ಮಹಿಳಾ ಖಾತೆಗಳಿವೆ ಎಂದು ತಿಳಿಸಿದರು.