ಐಪಿಎಲ್ ಪಂದ್ಯಗಳ ವೇಳೆ ನಡೆಯುತ್ತಿರುವ ಭದ್ರತಾ ಲೋಪ ಮುಂದುವರಿದಿದೆ. ಮೊನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿ ಮೈದಾನಕ್ಕೆ ನುಗ್ಗಿ ಹೈಡ್ರಾಮಾ ಸೃಷ್ಟಿಸಿದ್ದ.ಇದೀಗ ಮತ್ತೆ ಅಂತಹುದೇ ಒಂದು ಘಟನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯದ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದಾನೆ. ಮುಂಬೈ ತಂಡ ಬೌಲಿಂಗ್ ವೇಳೆ ಸ್ಲಿಪ್ನಲ್ಲಿ ನಿಂತಿದ್ದ ರೋಹಿತ್ ಶರ್ಮಾ ಅವರ ಸನಿಹಕ್ಕೆ ಹೋಗಿದ್ದಾನೆ. ಇದೇ ವೇಳೆ ತಮ್ಮ ಬಳಿಗೆ ಓಡಿ ಬಂದ ಅಭಿಮಾನಿಯನ್ನು ನೋಡಿ ರೋಹಿತ್ ಶರ್ಮಾ ಒಂದು ಕ್ಷಣ ಶಾಕ್ ಆದರು. ಅಭಿಮಾನಿಯನ್ನು ಕಂಡು ಹೆದರಿದ ರೋಹಿತ್, ಒಂದು ಹೆಜ್ಜೆ ಹಿಂದಕ್ಕೆ ಹೋಗಿದ್ದು ಕ್ಯಾಮೆರಾದಲ್ಲಿ ಸೆರೆ ಆಗಿದೆ. ನಂತರ ಆತನನ್ನು ರೋಹಿತ್ ಶರ್ಮಾ ತಬ್ಬಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಟಗಾರರ ಸುರಕ್ಷತೆ, ಭದ್ರತೆ ಬಗ್ಗೆಯೂ ಕೆಲವರು ಪ್ರಶ್ನೆ ಎತ್ತುತ್ತಿದ್ದಾರೆ.