ಕುಡಿಯುವ ನೀರಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ. 21 ವರ್ಷದ ನಂದಕುಮಾರ ಕಟ್ಟಿಮನಿ ಕೊಲೆಯಾದ ಯುವಕ. ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ಮಧ್ಯೆ ಮಾತಿನ ಚಕಮಕಿ ನಡದಿದೆ. ಬಳಿಕ ಘಟನೆ ವಿಕೋಪಕ್ಕೆ ತಿರುಗಿ ನಂದಕುಮಾರ ಕಟ್ಟಿಮನಿ ಎಂಬ ಯುವಕನನ್ನು ಹಣುಮಂತ ಎಂಬಾತ ಕೊಲೆ ಮಾಡಿದ್ದಾನೆ. ನೀರಿನ ವಿಚಾರಕ್ಕೆ ನೆರೆಯ ಸಂಬಂಧಿಕರು ಕೊಲೆಯಾದ ಯುವಕನ ಅಜ್ಜಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದರು.
ಇಬ್ಬರ ಮನೆಯ ನಡುವೆ ಇದ್ದ ನಲ್ಲಿಯ ನೀರು ತುಂಬಿಕೊಳ್ಳಲು ಹೋದಾಗ ಅಜ್ಜಿಯೊಂದಿಗೆ ಜಗಳ ಶುರುಮಾಡಿಕೊಂಡಿದ್ದರು. ಅಜ್ಜಿಯೊಂದಿಗೆ ಜಗಳ ಮಾಡುತ್ತಿದ್ದನ್ನು ಕಂಡ ಮೊಮ್ಮಗ ನಂದಕುಮಾರ ಪ್ರಶ್ನಿಸಲು ಮುಂದಾಗಿದ್ದಾನೆ. ಈ ವೇಳೆ ಹಣುಮಂತ ಮೊಮ್ಮಗನಿಗೆ ಚಾಕುವಿನಿಂದ ಇರಿದು ಕೊಲೆಗೈದಿದಾನೆ. ಕೊಲೆ ಆರೋಪಿ ಜೊತೆ ಆತನ ತಾಯಿ ಹನುಮವ್ವ ಇದಕ್ಕೆ ಸಾಥ್ ನೀಡಿದ್ದಾರೆ ಎನ್ನಲಾಗುತ್ತಿದೆ. ಹುಣಸಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.