ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಹೇಳಿದರು. ಸಚಿವರ, ಸದ್ಯ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬಿಕ್ಕಟ್ಟಿಲ್ಲ. ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆಯೂ ಸಹಜವಾಗಿಯೇ ಹೆಚ್ಚಾಗುತ್ತೆ. ಹೀಗಾಗಿಯೇ ಬಹಳ ಮುಂಚಿತವಾಗಿ ಸರಿಯಾದ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ರಾಜ್ಯದ ಯಾವುದೇ ವರ್ಗದ ಗ್ರಾಹಕರಿಗೆ ಲೋಡ್ ಶೆಡ್ಡಿಂಗ್ ಬಿಸಿ ತಟ್ಟದಂತೆ ಇಲಾಖೆ ಎಚ್ಚರವಹಿಸಿದ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರತಿ ದಿನದ ವಿದ್ಯುತ್ ಬಳಕೆ 329 ಮಿಲಿಯನ್ ಯೂನಿಟ್ನಷ್ಟಿದ್ದು – ಹಿಂದಿನ ವರ್ಷ ಇದೇ ಅವಧಿಯ ವಿದ್ಯುತ್ ಬಳಕೆ ಪ್ರಮಾಣ 300 ಮಿ.ಯೂ. ನಷ್ಟಿತ್ತು. ಕಳೆದ ವರ್ಷದ ಗರಿಷ್ಠ ಲೋಡ್ 15300+ ಮೆ.ವ್ಯಾ.ಆಗಿದ್ದರೆ, ಈ ವರ್ಷದ ಗರಿಷ್ಠ ಲೋಡ್ 17000+ ಮೆ.ವ್ಯಾ.ಗೆ ಏರಿದೆ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಕೃಷಿ ಪಂಪ್ ಸೆಟ್ ಗಳಿಗೆ 7 ತಾಸು ವಿದ್ಯುತ್ ಪೂರೈಕೆಗೆ ಆದೇಶ ನೀಡಲಾಗಿದೆ. ಬೇಸಿಗೆ ಕಾರಣದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.