ಕೋಲಾರ ಕಾಂಗ್ರೆಸ್ ಕಲಹವನ್ನ ಗಂಭೀರವಾಗಿ ಪರಿಗಣಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೋಲಾರ ಜಿಲ್ಲಾ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಗಳಾಗಿರುವ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಡಾ. ಎಂ.ಸಿ. ಸುಧಾಕರ್ಗೆ ಕೋಲಾರ ಅಭ್ಯರ್ಥಿ ಕೆ.ವಿ. ಗೌತಮ್ರನ್ನ ಗೆಲ್ಲಿಸಿಕೊಂಡು ಬರುವ ಹೊಣೆ ನೀಡಲಾಗಿದೆ. ಕೋಲಾರ ಟಿಕೆಟ್ ವಿಚಾರಕ್ಕೆ ಹೈಡ್ರಾಮಾ ಸೃಷ್ಟಿಸಿದ ಎಂ.ಸಿ. ಸುಧಾಕರ್ ಹಾಗೂ ಮುನಿಯಪ್ಪಗೆ ಜವಾಬ್ದಾರಿ ನೀಡಲಾಗಿದೆ. ಒಂದು ವೇಳೆ ಬಣ ರಾಜಕೀಯ ಮೇಲಾಟದಿಂದ ಕೆ.ವಿ. ಗೌತಮ್ ಸೋಲಾದರೆ, ಇಬ್ಬರು ಸಚಿವರ ತಲೆದಂಡ ಫಿಕ್ಸ್ ಅಂತ ಹೈಕಮಾಂಡ್ ಹೇಳಿದೆ. ಹೀಗಾಗಿ ಹಳೇ ದ್ವೇಷದಿಂದ ಕೋಲಾರ ಕಾಂಗ್ರೆಸ್ನಲ್ಲಿ ಅಲ್ಲೋಲ..ಕಲ್ಲೋಲ ಸೃಷ್ಟಿಸಿದ ಕೈನಾಯಕರಿಗೆ ಹೈಕಮಾಂಡ್ ಕಠಿಣ ಸಂದೇಶದಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೂರನೇ ವ್ಯಕ್ತಿಗೆ ಟಿಕೆಟ್ ನೀಡಿದ್ರೆ, ಸೋಲು ಖಂಡಿತ ಎಂದು ಹೇಳುತ್ತಿದ್ದ ಮುನಿಯಪ್ಪ, ಗೌತಮ್ ಹೆಸರು ಘೋಷಣೆ ಆಗುತ್ತಿದ್ದಂತೆ ಥಂಡಾ ಹೊಡೆದಿದ್ದಾರೆ. ಹೈಕಮಾಂಡ್ ನಿರ್ಧಾರವನ್ನ ಸ್ವಾಗತಿಸುತ್ತೇನೆ ಅಂತ ತಿಳಿಸಿದ್ದಾರೆ. ಇತ್ತ ಎಂ.ಸಿ. ಸುಧಾಕರ್ ಸಹ ಗೌತಮ್ ಬೆನ್ನಿಗೆ ನಿಂತಿದ್ದು, ಗೌತಮ್ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಆದಾಗ ಜೊತೆಗಿದಿದ್ದು ಗಮನ ಸೆಳೆಯಿತು. ಗೆಲ್ಲುವ ಅವಕಾಶ ಇರುವ ಕ್ಷೇತ್ರವನ್ನ ಆಂತರಿಕ ಕಲಹದಿಂದ ಕೈತಪ್ಪಿ ಹೋಗದಂತೆ ಎಚ್ಚರ ವಹಿಸಿರುವ ಕಾಂಗ್ರೆಸ್ ಹೈಕಮಾಂಡ್, ಕೋಲಾರ ಕೈವಶ ಪಡಿಸಿಕೊಳ್ಳಲು ಸರ್ವಪ್ರಯತ್ನವನ್ನ ಮುಂದುವರೆಸಿದ್ದಾರೆ.