ಉತ್ತರಕಾಂಡ ಡಾಲಿ ಧನಂಜಯ್ ಅಭಿನಯದ ಹೈವೋಲ್ಟೇಜ್ ಆಕ್ಷನ್ ಡ್ರಾಮ. ರೋಹಿತ್ ಪದಕಿ ಡೈರೆಕ್ಟ್ ಮಾಡ್ತಿರೋ, ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಿಸ್ತಿರೋ ಈ ಸಿನಿಮಾಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಕುಂದಾನಗರಿ ಬೆಳಗಾವಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಉತ್ತರಕಾಂಡ ಫಿಲ್ಮ್ ಟೀಮ್ ಜೊತೆ ಶಿವಣ್ಣ ಜಾಯಿನ್ ಆಗಿದ್ದಾರೆ.
ಇಂಟ್ರೆಸ್ಟಿಂಗ್ ಅಂದರೆ ಉತ್ತರಕಾಂಡ ತಂಡ ಈಗಾಗಲೇ ಎಲ್ಲಾ ಕಲಾವಿದರ ಮೊದಲ ನೋಟ ಅನಾವರಣಗೊಳಿಸಿದೆ. ಆದರೆ, ಮಾಸ್ ಲೀಡರ್ ಶಿವಣ್ಣ ನಯಾ ಅವತಾರವನ್ನ ಗುಟ್ಟಾಗಿರಿಸಿದ್ದು, ಉತ್ತರಕಾಂಡದಲ್ಲಿ ಹ್ಯಾಟ್ರಿಕ್ ಹೀರೋ ಹೇಗೆ ಕಾಣಿಸ್ತಾರೆನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ. ಟಗರು ನಂತರ ಶಿವಣ್ಣ ಹಾಗೂ ಡಾಲಿ ಧನಂಜಯ್ ಕಾಂಬೋ ರಿಪೀಟ್ ಆಗಿದ್ದು, ಉತ್ತರಕಾಂಡ ಮೇಲಿನ ನಿರೀಕ್ಷೆ ಇಮ್ಮಡಿ ಗೊಳಿಸಿದೆ.
ಇನ್ನೂ ಉತ್ತರಕಾಂಡದಲ್ಲಿ ಅತೀ ದೊಡ್ಡ ತಾರಾಬಳಗವಿದೆ. “ವಡಾ ಚೆನ್ನೈ”, “ಕಾಕ ಮುತ್ತೈ” ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ ಐಶ್ವರ್ಯ ಕನ್ನಡಕ್ಕೆ ಬಂದಿದ್ದಾರೆ. ದುರ್ಗಿ ಪಾತ್ರದ ಮೂಲಕ ಡಾಲಿಗೆ ಜೊಡಿಯಾಗಿದ್ದಾರೆ.
ಚೈತ್ರ ಜೆ ಆಚಾರ್ ಮಲಯಾಳಂ ನಟ ವಿಜಯ್ ಬಾಬು, ರಂಗಾಯಣ ರಘು, ಉಮಾಶ್ರೀ ಯೋಗರಾಜ್ ಭಟ್, ದಿಗಂತ್, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಹಲವರು ಉತ್ತರಕಾಂಡ ಸೇರಿಕೊಂಡಿದ್ದಾರೆ. ಬಿಟೌನ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಮ್ಯೂಸಿಕ್ ಕಂಪೋಸಿಷನ್ ಚಿತ್ರಕ್ಕಿದೆ. ಕೆ.ಆರ್.ಜಿ.ಸ್ಟೂಡಿಯೋಸ್ ನಿರ್ಮಾಣದಲ್ಲಿ ಅದ್ದೂರಿಯಾಗಿ ಮೂಡಿಬರಲಿದೆ.