ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ದೂರು ನೀಡಲು ಎಸ್ ಐಟಿಯಿಂದ ಸಹಾಯವಾಣಿ ತೆರೆಲಾಗಿದ್ದು, ಈವರೆಗೆ ಇದಕ್ಕೆ 30 ಕರೆಗಳು ಬಂದಿವೆ ಎಂದು ಎಸ್ ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕರೆ ಮಾಡಿದವರು ಯಾರು, ಅವರು ಏನು ಹೇಳಿದ್ದಾರೆ. ಈ ಕರೆಗಳೆಲ್ಲವೂ ಸಂತ್ರಸ್ತೆಯರಿಂದಲೇ ಬಂದಿವೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ, ಇನ್ನಾರಾದರೂ ಸಂತ್ರಸ್ತರು ಇದ್ದರೆ, ಹೆಲ್ಡ್ಲೈನ್ ಸಂಪರ್ಕಿಸಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಈ ಮಧ್ಯೆ, ಹೆಲ್ಪಲೈನ್ ಮೂಲಕ ದಾಖಲಾಗುವ ಹೇಳಿಕೆಗಳನ್ನೂ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಸ್ ಐಟಿ ಅಧಿಕಾರಿಗಳು ತಿಳಿಸಿದ್ದು, ಪ್ರಜ್ವಲ್ ರೇವಣ್ಣ ಅವರಿಗೆ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹಿಂಜರಿಯುತ್ತಾರೆ ಎಂಬ ಉದ್ದೇಶದಿಂದ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ದೂರು ನೀಡಲು ಎಸ್ಐಟಿಯಿಂದ ತೆರೆಯಲಾಗಿದೆ.