ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಾಣಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ. ತನಿಖೆಗಾಗಿ ವಿಮಾನವನ್ನು ಪ್ರತ್ಯೇಕ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ವಿಮಾನಯಾನ ಭದ್ರತೆ ಮತ್ತು ಬಾಂಬ್ ನಿಷ್ಕ್ರಿಯ ತಂಡವು ಸ್ಥಳದಲ್ಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದ್ದಾರೆ.
ಈ ಬಗ್ಗೆ ವಿಮಾನದಲ್ಲಿ ಪರಿಸೀಲನೆ ನಡೆಸಲಾಗಿದ್ದು, ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಆಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದೆಹಲಿಯಿಂದ ವಾರಾಣಸಿಗೆ ಇಂದು ಬೆಳಗ್ಗೆ 5. 35ಕ್ಕೆ ಹೋರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದ್ದು, 30 ನಿಮಿಷಗಳಲ್ಲಿ ಸ್ಫೋಟಗೊಳ್ಳಲಿದೆ ಎನ್ನುವ ಚೀಟಿಯೊಂದು ಪೈಲಟ್ ಒಬ್ಬರಿಗೆ ಶೌಚಾಲಯದಲ್ಲಿ ಸಿಕ್ಕಿತ್ತು. ತಕ್ಷಣವೇ ನಿಯಂತ್ರಣಾ ಕೊಠಡಿಗೆ ಮಾಹಿತಿ ರವಾನಿಸಿ, ವಿಮಾನ ಹಾರಾಟವನ್ನು ರದ್ದುಗೊಳಿಸಿ ಎಲ್ಲಾ ಪ್ರಯಾಣಿಕರನ್ನು ತುರ್ತು ಬಾಗಿಲಿನ ಮೂಲಕ ಸ್ಥಳಾಂತರಿಸಲಾಯಿತು. ವಿಮಾನದಲ್ಲಿ 176 ಮಂದಿ ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.