ನವದೆಹಲಿ: ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭಿರ್ರನ್ನು ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸುಳಿವು ನೀಡಿದ್ದಾರೆ. ಐಪಿಎಲ್ 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
ಇದರೊಂದಿಗೆ ರಾಹುಲ್ ದ್ರಾವಿಡ್ ನಂತರದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ನೇಮಕಗೊಂಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವಲ್ಲಿ ನಾವು ಗಮನಹರಿಸಿದ್ದೇವೆ. ಭಾರತವನ್ನಾ ಮುಂದಿನ ಹಂತಕ್ಕೆ ಏರಿಸಲು ನಮ್ಮ ಕೋಚ್ ನಮ್ಮ ದೇಶೀಯ ಕ್ರಿಕೆಟ್ ಚೌಕಟ್ಟಿನ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವುದು ಬಹಳ ಮುಖ್ಯ. ಹೀಗಾಗಿ ಭಾರತೀಯರನ್ನು ಕೋಚ್ ಆಗಿ ನೇಮಕ ಮಾಡಲು ಬಯಸಿದ್ದೇವೆ ಎಂದರು.
ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂರು ಬಾರಿ ಕೂಡ ಗೌತಮ್ ಗಂಭೀರ್ ಕೆಕೆಆರ್ ತಂಡದ ಭಾಗವಾಗಿದ್ದರು ಎಂಬುದು ವಿಶೇಷ. ಅಂದರೆ 2012 ಮತ್ತು 2014 ರಲ್ಲಿ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟಕ್ಕೇರಿದರೆ, 2024 ರಲ್ಲಿ ಗೌತಿ ಅವರ ಮಾರ್ಗದರ್ಶನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಹೀಗಾಗಿಯೇ ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಅವರನ್ನು ನೇಮಿಸಲು ಬಿಸಿಸಿಐ ಆಸಕ್ತಿವಹಿಸಿದೆ.