ಬೀಜಿಂಗ್ : ಮಧುಮೇಹ ಬಂದರೆ ಅದು ಗುಣವಾಗುವುದಿಲ್ಲ. ಆದರೆ ಜೀವನ ನಡೆಸಲು ಅದನ್ನು ನಿಯಂತ್ರಿಸಬೇಕಾಗುತ್ತದೆ. ಆದರೆ ಚೀನಾದ ಸಂಶೋಧಕರು ಮಧುಮೇಹಕ್ಕೆ ಸಂಬಂಧಿಸಿದಂತೆ ತಾವು ಅದ್ಭುತ ಸಂಶೋಧನೆ ಮಾಡಿರುವುದಾಗಿ ಘೋಷಿಸಿ ಕೊಂಡಿದ್ದಾರೆ. “ಸೆಲ್ ಥೆರಪಿ” ಮೂಲಕ ಮೊಟ್ಟ ಮೊದಲ ಬಾರಿ ಮಧುಮೇಹ ಚಿಕಿತ್ಸೆ ನೀಡಿ ರೋಗಿಯೊಬ್ಬರನ್ನು ಸಂಪೂರ್ಣ ಗುಣಮುಖ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
2021ರಲ್ಲಿ ವ್ಯಕ್ತಿಯೊಬ್ಬನಿಗೆ ಕೋಶಗಳ ಕಸಿ (ಸೆಲ್ ಟ್ರಾನ್ಸ್ಪ್ಲಾಂಟ್ ) ಮಾಡಲಾಗಿತ್ತು. ಒಂದೇ ವರ್ಷದಲ್ಲಿ ಅಂದರೆ 2022 ರಿಂದ ಆತ ಔಷಧ ಮುಕ್ತ ವ್ಯಕ್ತಿ ಆಗಿಬಿಟ್ಟಿದ್ದಾನೆ. ಮಧುಮೇಹಕ್ಕೆ ಈ ರೀತಿ ಸೆಲ್ ಕಸಿ ರಾಮಬಾಣದಂತಿದ್ದು, ಸಂಪೂರ್ಣ ಗುಣಪಡಿಸಬಹುದು ಎಂದು ಸಾಬೀತಾಗಿದೆ ಎಂದು ಸಂಶೋಧಕರನ್ನು ಉಲ್ಲೇಖಿಸಿ “ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್” ಪತ್ರಿಕೆ ವರದಿ ಮಾಡಿದೆ.