- ನಟಿ ಹೇಮಾಗೆ ಶಾಕ್ ಕೊಟ್ಟ ತೆಲುಗು ಚಿತ್ರರಂಗದ ಕಲಾವಿದರ ಸಂಘ
- ನಟಿ ಹೇಮಾ ಅವರನ್ನು ತೆಲುಗು ಸಿನಿಮಾ ಕಲಾವಿದರ ಸಂಘದಿಂದ ವಜಾ
ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ಸ್ ಸೇವಿಸಿದ ಆರೋಪದಲ್ಲಿ ಜೈಲು ಸೇರಿರುವ ನಟಿ ಹೇಮಾ ಅವರನ್ನು ತೆಲುಗು ಸಿನಿಮಾ ಕಲಾವಿದರ ಸಂಘದಿಂದ ವಜಾ ಮಾಡಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಯಲ್ಲಿ ನಡೆದಿದ್ದ, ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ಸ್ ಸೇವನೆ ಮಾಡಿದ್ದ ತೆಲುಗು ನಟಿ ಹೇಮಾ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಇನ್ನು ನಟಿ ಹೇಮಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಟಿ ಹೇಮಾ ಈಗಲೂ ತಾವೇನು ತಪ್ಪು ಮಾಡಿಲ್ಲ. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ನಡುವೆ ತೆಲುಗು ಚಿತ್ರರಂಗದ ಕಲಾವಿದರ ಸಂಘ ನಟಿ ಹೇಮಾಗೆ ಶಾಕ್ ಕೊಟ್ಟಿದೆ.
ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ನ ಪದಾಧಿಕಾರಿಯೂ ಆಗಿರುವ ಹೇಮಾ ಕೊಲ್ಲ ಅವರನ್ನು ಮಾ ಸಂಘದಿಂದ ಉಚ್ಛಾಟನೆ ಮಾಡಿ ಆದೇಶವನ್ನು ‘ಮಾ’ನ ಹಾಲಿ ಅಧ್ಯಕ್ಷ ಮಂಚು ವಿಷ್ಣು ಹೊರಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಈ ಬಗ್ಗೆ ಟ್ವೀಟ್ ಮಾಡಿದ್ದ ಮಂಚು ವಿಷ್ಣು, ಹೇಮಾ ಕೊಲ್ಲ ಪರವಾದ ನಿಲವು ತಳೆದಿದ್ದರು. ಹೇಮಾ ವಿರುದ್ಧ ಕೆಲವು ಷಡ್ಯಂತ್ರಗಳು ನಡೆಯುತ್ತಿವೆ. ಆಕೆ ಅಪರಾಧಿ ಎಂದು ನಿರ್ಧಾರವಾಗುವವರೆಗೆ ಹೇಮಾ ವಿರುದ್ಧ ನಿರ್ಣಯಕ್ಕೆ ಬರಬೇಡಿ, ಸಾಮಾಜಿಕ ಜಾಲತಾಣದಲ್ಲಿ ಏನೂ ನಿಂದನಾತ್ಮಕ ಪೋಸ್ಟ್ಗಳನ್ನು ಹಂಚಿಕೊಳ್ಳಬೇಡಿ ಎಂದಿದ್ದರು. ಆದರೆ ಈಗ ಮಂಚು ವಿಷ್ಣು ಅವರೇ ಹೇಮಾ ಅವರನ್ನು ಕಲಾವಿದರ ಸಂಘದಿಂದ ಹೊರಹಾಕಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ನಟಿ ಹೇಮಾರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳ ಸಲಹೆ ಪಡೆದು ಅಂತಿಮವಾಗಿ ಹೇಮಾರನ್ನು ಕಲಾವಿದರ ಸಂಘದಿಂದ ವಜಾ ಮಾಡಲಾಗಿದೆ ಎಂದು ಮಂಚು ವಿಷ್ಣು ಹೇಳಿದ್ದಾರೆ. ವಜಾ ಮಾಡುವ ಮುನ್ನ, ಹೇಮಾಗೆ ಸಂಘದಿಂದ ನೊಟೀಸ್ ನೀಡಲಾಗಿತ್ತಂತೆ. ಡ್ರಗ್ಸ್ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿತ್ತಂತೆ. ಆದರೆ ಹೇಮಾ ಆ ನೊಟೀಸ್ಗೂ ಯಾವುದೇ ಉತ್ತರ ನೀಡದೇ ಇರುವ ಕಾರಣ ಈಗ ಮಂಚು ವಿಷ್ಣು ಇತರೆ ಪದಾಧಿಕಾರಿಗಳ ನಿರ್ಣಯವನ್ನು ತೆಗೆದುಕೊಂಡು ಹೇಮಾರನ್ನು ಸ್ಥಾನದಿಂದ ತೆಗೆದು ಹಾಕಿರುವುದು ಮಾತ್ರವೇ ಅಲ್ಲದೆ ಕಲಾವಿದರ ಸಂಘದಿಂದಲೇ ಹೊರ ಹಾಕಿದ್ದಾರೆ.