ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ಹೊಂದಿ ಕೊಂಡಿರುವ ಜಾರಕ್ಬಂಡೆ ಕಾವಲ್ ಗ್ರಾಮ ವ್ಯಾಪ್ತಿಯ ಖಾಸಗಿ ಲೇಔಟ್ನಲ್ಲಿದ್ದ 20ಕ್ಕೂ ಹೆಚ್ಚು ಮನೆಗಳನ್ನು ಬಿಡಿಎ ಅಧಿಕಾರಿಗಳು ನೆಲಸಮ ಮಾಡಿದ್ದಾರೆ. ನಾಲ್ಕಾರು ಜೆಸಿಬಿಗಳ ಜೊತೆಯಲ್ಲಿ ಬಂದ ಬಿಡಿಎ ಇಂಜಿನಿಯರ್ಗಳು, ಮನೆಗಳ ಮಾಲೀಕರ ಗಮನಕ್ಕೂ ತೆಗೆದುಕೊಂಡು ಬಾರದೆ ಕಾಂಪೌಂಡ್ ಸೇರಿ ನಿರ್ಮಾಣ ಹಂತದಲ್ಲಿದ್ದ ಮನೆಗಳನ್ನು ಭಾಗಶಃ ಒಡೆದು ಹಾಕಿ ದೌರ್ಜನ್ಯ ಎಸಗಿದ್ದಾರೆ.
ಕಳೆದ ತಿಂಗಳು ಯಲಹಂಕದ ಜೆ.ಬಿ. ಕಾವಲ್ನ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ 15ಕ್ಕೂ ಹೆಚ್ಚು ಮನೆಗಳ ಮಾಲೀಕರಿಗೆ ಬಿಡಿಎ ಇಂಜಿನಿಯರ್ ನೋಟಿಸ್ ನೀಡಿದ್ದರು. ಸದರಿ ಜಮೀನು ಕಾರಂತ ಲೇಔಟ್ಗೆ ಸೇರಿರುವುದರಿಂದ ಮನೆಗಳನ್ನು ನಿರ್ಮಿಸುವಂತಿಲ್ಲ. ಇದಕ್ಕೆ ಸಮಜಾಯಿಷಿ ನೀಡದಿದ್ದಲ್ಲಿ ಮನೆಗಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಶುಕ್ರವಾರ ಬೆಳಗ್ಗೆಯೇ ಕೆಲ ಪೊಲೀಸರ ಜತೆ ಆಗಮಿಸಿದ ಪ್ರಾಧಿಕಾರದ ಇಂಜಿನಿಯರ್ಗಳು ಲೇಔಟ್ನಲ್ಲಿದ್ದ ಹಲವು ಮನೆ, ಕಾಂಪೌಂಡ್ ಕೆಡವಿದ್ದಾರೆಂದು ಸ್ಥಳೀಯರು ದೂರಿದ್ದಾರೆ. ಬಡಾವಣೆಗಳಿಗೆ ನೋಟಿಸ್ ನೀಡಿ ಬೆದರಿಕೆ ಒಡ್ಡುತ್ತಿದ್ದಾರೆಂಬ ದೂರು ಕೇಳಿಬಂದಿತ್ತು. ಇದನ್ನು ಬಿಡಿಎ ಮುಖ್ಯಸ್ಥರ ಗಮನಕ್ಕೂ ತಂದಾಗ, ನೋಟಿಸ್ ಜಾರಿ ಮಾಡಲು ಯಾರಿಗೂ ನಿರ್ದೇಶನ ನೀಡಿಲ್ಲವೆಂದು ಹೇಳಿದರು. ಈಗ ಏಕಾಏಕಿ ಅನುಮೋದಿತ ಲೇಔಟ್ನಲ್ಲಿದ್ದ ಮನೆಗಳನ್ನು ಒಡೆದುಹಾಕಿದ್ದರೂ, ಬಿಡಿಎ ಮಾತ್ರ ಈ ಕಾರ್ಯಾಚರಣೆಗೂ ತಮಗೂ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡಿದೆ.