- NDA ಸರ್ಕಾರ ರಚನೆಯಾದ ಬಳಿಕ ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸ
ಪ್ರಧಾನ ಮಂತ್ರಿ ಮೋದಿ ಇಟಲಿಯಲ್ಲಿ ನಡೆಯಲಿರುವ G7 ಶೃಂಗಸಭೆಯಲ್ಲಿ ಪಾಳ್ಗೊಳ್ಳಲಿದ್ದಾರೆ. ಇಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಪ್ರಧಾನಿ ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿವೆ. NDA ಸರ್ಕಾರ ರಚನೆಯಾದ ಬಳಿಕ ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸ ಇದಾಗಿದೆ.
ಬೋರ್ಗೊ ಎಗ್ನಾಜಿಯಾದ ಐಷಾರಾಮಿ ರೆಸಾರ್ಟ್ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ವಿಶ್ವದ ಗಣ್ಯ ನಾಯಕರ ಜೊತೆಗೆ ಜನರ ಜೀವನ ಸುಧಾರಿಸುವ ಹಾಗೂ ಕೃತಕ ಬುದ್ಧಿಮತ್ತೆ, ಶಕ್ತಿ, ಆಫ್ರಿಕಾ-ಮೆಡಿಟರೇನಿಯನ್ ವಿಷಯ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಪೋಪ್ ಫ್ರಾನ್ಸಿಸ್ ಸೇರಿ ಅನೇಕ ಗಣ್ಯರು ಸಹ ಉಪಸ್ಥಿತರಿರಲಿದ್ದಾರೆ. ಶೃಂಗಸಭೆಯಲ್ಲಿ ವಿಶ್ವ ನಾಯಕರೊಂದಿಗೆ ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಭಾರತದ ದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ.
ಪ್ರಧಾನಿ ಟ್ವೀಟ್: ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಗೆ ಆಗಮಿಸಿದ್ದೇನೆ, ವಿಶ್ವ ನಾಯಕರೊಂದಿಗೆ ದ್ವಿಪಪಕ್ಷೀಯ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ. ನಾವೆಲ್ಲರೂ ಒಟ್ಟಾಗಿ, ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಉಜ್ವಲ ಭವಿಷ್ಯಕ್ಕಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಟ್ವೀಟ್ ಮಾಡಿಕೊಂಡಿದ್ದಾರೆ.