- ಬಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ ಆರೋಪ
- ಠಾಣೆಯ ಮುಂದೆ ಕುಳಿತು ಕಾರ್ಯಕರ್ತರು ಪ್ರತಿಭಟನೆ
ಬಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ ಆರೋಪ ಕೇಳಿಬಂದಿದ್ದು, ಹಲ್ಲೆ ಖಂಡಿಸಿ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳಿಂದ ಮುತ್ತಿಗೆಗೆ ಯತ್ನಿಸಲಾಗಿದೆ. ಸೋಮಶೇಖರ ಚೆನ್ನಶೆಟ್ಟಿ ಎಂಬುವವರು ಪ್ರಾಣಿ ರಕ್ಷಕ ಹಾಗೂ ಉರಗ ರಕ್ಷಕನೂ ಆಗಿದ್ದು, ಗೋರಕ್ಷಣೆ ಮಾಡಲು ಹೋದಾಗ ಧಾರವಾಡ ನಗರದ ಹಳೇ ಎಪಿಎಂಸಿ ಬಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಠಾಣೆಯ ಮುಂದೆ ಕುಳಿತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ಮತ್ತು ಪ್ರತಿಭಟನಕಾರರ ಮಧ್ಯೆ ವಾಗ್ವಾದ ನಡೆಯಿತು.
ಈ ಕುರಿತು ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ಮಾತನಾಡಿದ್ದು, ಜಾನುವಾರು ವಿಚಾರವಾಗಿ ಎರಡು ಕೋಮಿನವರ ಮಧ್ಯೆ ಗಲಾಟೆಯಾಗಿದೆ. ಒಂದು ಕೋಮಿನವರು ಮಾರಣಾಂತಿಕ ಹಲ್ಲೆಯ ದೂರು ಕೊಟ್ಟಿದ್ದಾರೆ. ಇದರ ಪ್ರಕಾರ ಎಫ್ಐಆರ್ ತೆಗೆದುಕೊಳ್ಳುತ್ತಿದ್ದೇವೆ. ದೂರಿನಲ್ಲಿ ಇಬ್ಬರು ಮತ್ತು ಹತ್ತು ಜನರು ಹಲ್ಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಒಟ್ಟು ಇಬ್ಬರ ಮೇಲೆ ಹಲ್ಲೆಯಾಗಿದೆ. ಹಲ್ಲೆಯಾಗ ಸ್ಥಳದಲ್ಲಿ ಸಿಸಿಟಿವಿಗಳಿದ್ದು, ಅದನ್ನೆಲ್ಲ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.