- ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಬಿಜೆಪಿ ಆಕ್ರೋಶ
- ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ
- ಪೆಟ್ರೋಲ್, ಡೀಸೆಲ್ ದರ ಮೂರು ರೂಪಾಯಿ ಏರಿಸಿದ್ದೀರ, ನಿಮಗೆ ಮಾನ ಮರ್ಯಾದೆ ಇದ್ಯಾ
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಬಿಜೆಪಿ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಇಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕೂಡ ಬಿಜೆಪಿ ನಾಯಕರು ಹೋರಾಟ ನಡೆಸಿದರು. ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಸಿ.ಟಿ ರವಿ, ಅಶ್ವತ್ಥನಾರಾಯಣ್ ಸೇರಿದಂತೆ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ದರು.
ಈ ಪ್ರತಿಭಟನೆ ವೇಳೆ ಡೋಂಗಿ ಮುಖ್ಯಮಂತ್ರಿ, ಎರಡು ನಾಲಿಗೆಯ ಸಿದ್ದರಾಮಯ್ಯರ ಎರಡು ನಾಲಿಗೆಯನ್ನ ಪ್ಲೇ ಮಾಡಿ ತೋರುಸ್ತೀನಿ ನೋಡಿ ಎಂದ ಆರ್ ಅಶೋಕ್, ಸಿದ್ದರಾಮಯ್ಯ ಈ ಹಿಂದೆ ನೀಡಿರುವ ಹೇಳಿಕೆಯನ್ನು ವಿಡಿಯೋ ಮೂಲಕ ಪ್ಲೇ ಮಾಡಿದರು. ನಂತರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ನಾವು ಒಂದು ರೂಪಾಯಿ ಏರಿಸಿದ್ದಕ್ಕೆ ಮಾನ ಮರ್ಯಾದೆ ಇದ್ಯಾ ಅಂದಿದ್ರು. ಈಗ ಮೂರು ರೂಪಾಯಿ ಏರಿಸಿದ್ದೀರ, ನಿಮಗೆ ಮಾನ ಮರ್ಯಾದೆ ಇದ್ಯಾ ಎಂದು ಪ್ರಶ್ನಿಸಿದರು.
ನುಂಗಣ್ಣ ಸಿದ್ದರಾಮಣ್ಣ ಎನ್ನುವಂತಾಗಿದೆ ಎಂದ ವಿಪಕ್ಷ ನಾಯಕ ಆರ್ ಅಶೋಕ್, ₹187 ಕೋಟಿ ನುಂಗಿದ ನಾಗೇಂದ್ರ ಮೊದಲ ವಿಕೆಟ್, ಎರಡನೇ ವಿಕೆಟ್ ಸಿದ್ದರಾಮಯ್ಯನವ್ರೇ ಆಗಿದ್ದಾರೆ. ಪಾಪ, ನಾಗೇಂದ್ರ ಜೇನು ಕಿತ್ತು ಕೈ ಹಿಸುಕಿಕೊಂಡಿದ್ದಾನೆ ಅಷ್ಟೇ. ಹಣಕಾಸು ಸಚಿವರೇ 80% ನುಂಗಿರೋದು, ಯಾರು ಹಣಕಾಸು ಸಚಿವರು ಈ ಸಿದ್ದರಾಮಯ್ಯನವರೇ ಅಲ್ವೇ? 80 ಕೋಟಿ ಸ್ಕಾಲರ್ ಶಿಫ್ ಹಣ ಬಾರ್ಗೆ ಹೋಗಿದೆ. ನಿಷ್ಠಾವಂತ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಬೆಲೆ ಇಲ್ಲ. ಹೀಗಾಗಿಯೇ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಎಂದು ಟೀಕಿಸಿದರು.