- ನಾಗರಹೊಳೆ ಪ್ರದೇಶಕ್ಕೆ ಬರುವ ಪ್ರವಾಸಿಗರಿಗಾಗಿ ಮಿನಿ ಬಸ್ ವ್ಯವಸ್ಥೆ
- ಬಸ್ ಗಳಿಗೆ ಹಸಿರು ನಿಶಾನೆ ತೋರಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಮೂರು ಸುಸಜ್ಜಿತ ಮಿನಿ ಬಸ್ ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. 16,55,585 ರೂ.ಗಳಿಗೆ ಮಿನಿ ಬಸ್ ಛಾಸಿ ಖರೀದಿಸಲಾಗಿದ್ದು, ರಮೇಶ್ ಗೋವಿಂದನ್ ನೀಡಿರುವ 14,81,590 ರೂ. ಮತ್ತು ಕೊಯಮತ್ತೂರಿನ ಹರೀ ಶಾಂತಾರಾಮ್ ಅವರು ನೀಡಿರುವ 20 ಲಕ್ಷ ರೂ. ಸಿ.ಎಸ್.ಆರ್. ನೆರವಿನಿಂದ ಕವಚ ನಿರ್ಮಾಣ ಮಾಡಲಾಗಿದೆ.
ಇಂದು ವಿಧಾನಸೌಧದ ಮುಂದೆ ಈ ಬಸ್ ಗಳಿಗೆ ಹಸಿರು ನಿಶಾನೆ ತೋರಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಫಾರಿ ವಾಹನದಲ್ಲಿ ವಿಕಾಸಸೌಧಕ್ಕೆ ಅಧಿಕಾರಿಗಳೊಂದಿಗೆ ಪ್ರಯಾಣಿಸಿದರು.
ಅರಣ್ಯದೊಳಗೆ ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿ ಹಗಲಿರುಳು ದುಡಿಯುವ ಸಿಬ್ಬಂದಿಗೆ 2 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದ್ದು, ಕಡತವನ್ನು ಹಣಕಾಸು ಇಲಾಖೆಯ ಅನುಮೋದನೆಗೆ ಸಲ್ಲಿಸಲಾಗಿದೆ ಶೀಘ್ರವೇ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಈ ವೇಳೆ ತಿಳಿಸಿದರು.
ಬಸ್ ಉದ್ಘಾಟನೆಯ ವೇಳೆ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಜಿ.ಡಿ.ಹರೀಶ್ ಗೌಡ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ದೀಕ್ಷಿತ್, ಸುಭಾಷ್ ಮಾಲ್ಕಡೆ ಮತ್ತಿತರರು ಪಾಲ್ಗೊಂಡಿದ್ದರು.