- ʻಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ʼನಲ್ಲಿ ಬಿರುಕು
- ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪ
ದೇಶದ ಅತೀ ಉದ್ದದ ಸಮುದ್ರ ಸೇತುವೆ “ಅಟಲ್ ಸೇತು” ಎಂದು ಕರೆಯಲಾಗುವ ʻಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ʼನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಳೆದ ಐದು ತಿಂಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ಅಟಲ್ ಸೇತುಗೆ ಚಾಲನೆ ನೀಡಿದ್ದರು.
ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ, ರಸ್ತೆ ಮೇಲೆ ಸಂಚರಿಸಿ, ಬಿರುಕು ಬಿಟ್ಟ ಜಾಗವನ್ನು ತೋರಿಸಿ ರಸ್ತೆ ಸುರಕ್ಷತೆಯ ಬಗ್ಗೆ ಪರಿಶೀಲಿಸಿದ್ದಾರೆ. ಹಾಗೆಯೇ ಅದರ ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮರದ ಪಟ್ಟಿಯನ್ನು ಬಿರುಕಿನೊಳಗೆ ಇಳಿಸಿ, ಬಿರುಕಿನ ಆಳದ ಪ್ರಮಾಣವನ್ನು ತೋರಿಸಿದ್ದಾರೆ. ಇದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಅಲ್ ಸೇತು ಉದ್ಘಾಟನೆಯಾದ ಕೆಲ ತಿಂಗಳಲ್ಲೇ ಸೇತುವೆಯ ಬಳಿ ಅರ್ಧ ಕಿ.ಮೀ ನಷ್ಟು ರಸ್ತೆ ಬಿರುಕು ಬಿಟ್ಟಿದೆ. ನಾನು ಬರೀ ಆರೋಪ ಮಾಡುವ ಬದಲು ನಿಜವಾಗಿಯೂ ಏನಾಗಿದೆ ಎಂಬುದನ್ನು ಜನರಿಗೆ ತೋರಿಸಲು ಬಂದಿದ್ದೇನೆ. ಸರ್ಕಾರವು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತದೆ. ಆದರೆ, ಇಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ನೋಡಿ. ಸೇತುವೆ ಮೇಲಿನ ರಸ್ತೆ ಬಿರುಕು ಬಿಟ್ಟಿದೆ ಎಂದು ಪಟೋಲೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ತಿರುಗೇಟು:
ನಾನಾ ಪಟೋಲೆ ಅವರ ಆರೋಪಕ್ಕೆ ಆಡಳಿತಾರೂಢ ಬಿಜೆಪಿ ಯೋಜನೆಯ ನೋಡಲ್ ಏಜೆನ್ಸಿಯಾಗಿರುವ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್ಡಿಎ) ಸ್ಪಷ್ಟನೆ ನೀಡಿದೆ. ಬಿರುಕು ಬಿಟ್ಟಿರುವುದು ಅಟಲ್ ಸೇತುವೆಯ ಮೇಲೆ ಅಲ್ಲ, ನವಿ ಉಲ್ವೆಯಿಂದ ಬರುವ ಸರ್ವಿಸ್ ರಸ್ತೆಯಲ್ಲಿ ಎಂದು ತಿಳಿಸಿದೆ.