- ಪ್ರಿಯಕರ ಮದುವೆಗೆ ನಿರಾಕರಿಸಿದ ಹಿನ್ನೆಲೆ ಯುವತಿ ಆತ್ಮಹತ್ಯೆ
- ಪ್ರಿಯಕರ ವಿನಯ್ ರೆಡ್ಡಿಗಾಗಿ ಪೊಲೀಸರ ಹುಡುಕಾಟ
ಮಹಿಳಾ ಸಾಂತ್ವಾನ ಕೇಂದ್ರದ ಕಟ್ಟಡ ಮೇಲಿಂದ ಬಿದ್ದು ಯುವತಿ ಮೃತಪಟ್ಟ ಘಟನೆ ರಾಯಚೂರು ನಗರದಲ್ಲಿ ನಡೆದಿದ್ದು, ಪ್ರಿಯಕರ ಮದುವೆಗೆ ನಿರಾಕರಿಸಿದ ಹಿನ್ನೆಲೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಅನುರಾಧಾ ಮತ್ತು ವಿನಯ್ ರೆಡ್ಡಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, ಪ್ರೇಮ ವಿವಾಹಕ್ಕೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಜೋಡಿ ಪೊಲೀಸರ ಮೊರೆ ಹೋಗಿದ್ದಾರೆ. ಆದ್ರೆ, ಪ್ರಿಯಕರ ಪೊಲೀಸ್ ಠಾಣೆಯಲ್ಲಿ ಪ್ರೀತಿಗೆ ಒಪ್ಪಿ ಬಳಿಕ ಸಾಂತ್ವನ ಕೇಂದ್ರದಲ್ಲಿ ಉಲ್ಟಾ ಹೊಡೆದಿದ್ದಾನೆ. ಪ್ರಿಯಕರನ್ನೇ ನಂಬಿ ಮನೆಬಿಟ್ಟು ಬಂದ ಯುವತಿ ಮನನೊಂದು ಕಟ್ಟಡ ಮೇಲಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ರಾಯಚೂರಿನ ದೇವರ ಕಾಲೋನಿಯಲ್ಲಿರುವ ಸಾಂತ್ವನ ಕೇಂದ್ರದಲ್ಲಿ ಈ ದುರ್ಘಟನೆ ನಡೆದಿದೆ. ಅನುರಾಧಾ(19) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಅನುರಾಧಾ ವಿನಯ್ ರೆಡ್ಡಿ ಎಂಬುವನನ್ನು ಪ್ರೀತಿಸುತ್ತಿದ್ದಳು. ಜೂನ್ 20ರಂದು ರಕ್ಷಣೆ ಕೋರಿ ಮಾರ್ಕೆಟ್ ಯಾರ್ಡ್ ಠಾಣೆಗೆ ತೆರಳಿ ಪೋಷಕರ ಜೊತೆ ಹೋಗಲ್ಲವೆಂದು ಅನುರಾಧಾ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು, ಅನುರಾಧಾಳನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರು. ಆದ್ರೆ, ಪ್ರಿಯಕರ ವಿನಯ್ ರೆಡ್ಡಿ, ಸಾಂತ್ವನ ಕೇಂದ್ರಕ್ಕೆ ಬಂದು ನಿನ್ನನ್ನ ಮದುವೆ ಆಗಲ್ಲ ಎಂದು ಅನುರಾಧಾಗೆ ಹೇಳಿದ್ದಾನೆ. ಇದರಿಂದ ಮನನೊಂದ ಅನುರಾಧಾ, ಮಹಿಳಾ ಸಾಂತ್ವನ ಕೇಂದ್ರದ ಮೊದಲನೇ ಮಹಡಿಯಿಂದ ಹಾರಿದ್ದಾಳೆ. ಇದರಿಂದ ಅನುರಾಧಾ ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಆಕೆಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಪಶ್ಚಿಮ ಠಾಣೆಯ ಪೊಲೀಸರು ಪ್ರಿಯಕರ ವಿನಯ್ ರೆಡ್ಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.