- ಮೂರ್ನಾಲ್ಕು ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಮಾನ್ಸೂನ್ ಆಗಮನ
- ದೆಹಲಿಯಲ್ಲಿಈ ತಿಂಗಳ ಕೊನೆಯ ಎರಡು ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ
- ಹವಾಮಾನ ಸಂಸ್ಥೆ ಮುನ್ಸೂಚನೆ
ದೇಶದ ಹಲವು ರಾಜ್ಯಗಳಲ್ಲಿ ಮಾನ್ಸೂನ್ ಅಬ್ಬರ ಜೋರಾಗಿ ಕಂಡು ಬರುತ್ತಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇಂದು ಕೂಡ ಹಲವೆಡೆ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಇಂದು ದೇಶದ ಹಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ದಿನಗಳಲ್ಲಿ ಉತ್ತರ ಅರಬ್ಬಿ ಸಮುದ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಆಗ್ನೇಯ ರಾಜಸ್ಥಾನದ ಹೆಚ್ಚುವರಿ ಪ್ರದೇಶಗಳಲ್ಲಿ ಮಾನ್ಸೂನ್ ಅಬ್ಬರ ಜೋರಾಗುವ ನಿರೀಕ್ಷೆಯಿದೆ. ಮುಂದಿನ 4-5 ದಿನಗಳಲ್ಲಿ ಪಶ್ಚಿಮ ಕರಾವಳಿ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಮಾನ್ಸೂನ್ ಆಗಮನವಾಗಲಿದೆ ಎಂದು ಹವಾಮಾನ ಸಂಸ್ಥೆ ಘೋಷಿಸಿದೆ. ದೆಹಲಿಯಲ್ಲಿಈ ತಿಂಗಳ ಕೊನೆಯ ಎರಡು ದಿನಗಳಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆ ಇದ್ದು, ಇದು ಮುಂಗಾರು ಆಗಮನದ ಸೂಚನೆಯಾಗಿರಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಬೆಂಗಳೂರಿನಲ್ಲಿಯೂ ಇಂದು ಬೆಳ್ಳಂಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣ ಕಂಡು ಬಂದಿದ್ದು, ಬೆಳಗ್ಗೆ 7 ಗಂಟೆ ಸುಮಾರಿಗೆ ನಗರದಲ್ಲಿ ಜಿಟಿ ಜಿಟಿ ಮಳೆ ಶುರುವಾಗಿದೆ. 9 ಗಂಟೆ ತನಕವೂ ಮಳೆ ಸುರಿಯುತ್ತಲೇ ಇತ್ತು. ಹವಾಮಾನ ಇಲಾಖೆ ಪ್ರಕಾರ ಮುಂದಿನ ಎರಡು- ಮೂರು ದಿನಗಳಲ್ಲಿ ಅನೇಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಚಟುವಟಿಕೆಗಳು ಹೆಚ್ಚಾಗಲಿವೆ. ಉತ್ತರ ಬಿಹಾರದಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದ್ದು, ದಕ್ಷಿಣ ಬಿಹಾರದಲ್ಲಿ ಗುಡುಗು, ಸಿಡಿಲಿನ ಆರ್ಭಟ ಹೆಚ್ಚಾಗಲಿದೆ. ಪಾಟ್ನಾ ಸೇರಿದಂತೆ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಪ್ರದೇಶದ ಲಖನೌ, ಉನ್ನಾವ್, ರಾಯ್ ಬರೇಲಿ, ಅಮೇಥಿ, ಕಾನ್ಪುರ ದೇಹತ್, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಚಂಡಮಾರುತ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಅದೇ ರೀತಿ ಪಿಲಿಭಿತ್, ಲಖಿಂಪುರ ಖೇರಿ, ಗೊಂಡಾ, ಬಸ್ತಿ, ಅಜಂಗಢ, ಗೋರಖ್ಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಪ್ರೈಮೆಟ್ ಹವಾಮಾನದ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕೇರಳ, ಕರಾವಳಿ ಕರ್ನಾಟಕ, ಕೊಂಕಣ ಮತ್ತು ಗೋವಾ ಮತ್ತು ಗುಜರಾತ್ನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಿಕ್ಕಿಂ, ಅಸ್ಸಾಂ, ಮೇಘಾಲಯ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ಛತ್ತೀಸ್ಗಢ, ರಾಜಸ್ಥಾನದ ಕೆಲವು ಭಾಗಗಳು ಮತ್ತು ಉತ್ತರ ಪ್ರದೇಶದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗಬಹುದು.