ಬಾಲಿವುಡ್ನಲ್ಲಿ ಸ್ಟಾರ್ ನಟರ ಸಿನಿಮಾಗಳು ಕೂಡ ಮುಗ್ಗರಿಸುತ್ತಿರುವಾಗ ಸ್ಟಾರ್ ಕಲಾವಿದರೇ ಇಲ್ಲದ ಸಿನಿಮಾವೊಂದು ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ಹಾರರ್ ಕಹಾನಿ ಇರುವ ಹಿಂದಿಯ ‘ಮುಂಜ್ಯ’ ಸಿನಿಮಾ ಸೂಪರ್ ಹಿಟ್ ಆಗಿದ್ದು ಪ್ರೇಕ್ಷಕರು ಈ ಚಿತ್ರಕ್ಕೆ ಮನಸೋತಿದ್ದಾರೆ. ಸ್ಟಾರ್ ನಟರ ಸಿನಿಮಾಗಳ ನಡುವೆಯೂ ‘ಮಂಜ್ಯ’ ಚಿತ್ರ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ.
Maddock Films ಸಂಸ್ಥೆಯ ಮೂಲಕ ದಿನೇಶ್ ವಿಜನ್ ಮತ್ತು ಅಮರ್ ಕೌಶಿಕ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಆದಿತ್ಯ ಸರ್ಪೋತ್ದಾರ್ ಅವರು ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರು ಹೇಳಿರುವ ಹಾರರ್ ಕಹಾನಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಶಾರ್ವರಿ ವಾಘ್, ಅಭಯ್ ವರ್ಮಾ, ಮೋನಾ ಸಿಂಗ್, ಸತ್ಯರಾಜ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
‘ಮುಂಜ್ಯ’ ಸಿನಿಮಾಗೆ ಮೊದಲ ದಿನ 4.21 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನ 7.40 ಕೋಟಿ ರೂಪಾಯಿ ಗಳಿಕೆ ಆಯಿತು. ಮೂರನೇ ದಿನ 8.43 ಕೋಟಿ ರೂಪಾಯಿ ಹರಿದುಬಂತು. ನಂತರ ಪ್ರತಿ ದಿನ 3 ಅಥವಾ 4 ಕೋಟಿ ರೂಪಾಯಿ ಗಳಿಸುತ್ತಾ ಈ ಸಿನಿಮಾ ಮುನ್ನುಗ್ಗಿತು. ನಂತರದ ವಾರಾಂತ್ಯದಲ್ಲಿ ಕಲೆಕ್ಷನ್ ಹೆಚ್ಚಾಯಿತು. 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವ ಸಿನಿಮಾದ ಒಟ್ಟು ಕಲೆಕ್ಷನ್ 100 ಕೋಟಿ ರೂಪಾಯಿ ಮೀರಿದೆ.