ಒಂದಾಗಿ ಬಾಳಲು ಸಾಧ್ಯವಿಲ್ಲವೆಂದು ನೊಂದ ಪ್ರೇಮಿಗಳಿಬ್ಬರು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ತಲಘಟ್ಟಪುರ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ನಡೆದಿದೆ. ಶ್ರೀಕಾಂತ್ (24) ಹಾಗೂ ಅಂಜನಾ (20) ಆತ್ಮಹತ್ಯೆಗೆ ಶರಣಾದವರು. ಮಂಗಳವಾರ ಸಂಜೆ ಅಂಜನಾಪುರದ ತುಳಸಿಪುರ ಕೆರೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಶ್ರೀಕಾಂತ್ ಹಾಗೂ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಅಂಜನಾ ಪರಸ್ಪರ ಪ್ರೀತಿಸುತ್ತಿದ್ದರು. ವಿವಾಹಿತನಾಗಿದ್ದರೂ ಸಹ ಶ್ರೀಕಾಂತ್ ಅಂಜನಾಳನ್ನ ಪ್ರೀತಿಸುತ್ತಿದ್ದ. ಶ್ರೀಕಾಂತ್ ವಿವಾಹಿತನಾಗಿರುವುದರಿಂದ ಒಟ್ಟಿಗೆ ಬದುಕಲು ಸಾಧ್ಯವಿಲ್ಲವೆಂದು ಇಬ್ಬರು ಸಹ ಬೇಸತ್ತಿದ್ದರು. ಇದರಿಂದ ಸಾಯುವ ನಿರ್ಧಾರಕ್ಕೆ ಬಂದಿದ್ದ ಈ ಜೋಡಿ ಆಟೋದಲ್ಲಿ ಅಂಜನಾಪುರದ ತುಳಸಿಪುರ ಕೆರೆ ಬಳಿ ಬಂದಿದ್ದಾರೆ. ಬಳಿಕ ʻನಮ್ಮ ಸಾವಿಗೆ ಯಾರು ಕಾರಣರಲ್ಲ, ಒಟ್ಟಿಗೆ ಬದುಕಲು ಆಗದೆ ನಾವು ಸಾಯ್ತಿದ್ದೇವೆ’ ಎಂದು ವಿಡಿಯೋ ಚಿತ್ರೀಕರಿಸಿದ್ದ ಅಂಜನಾ, ಅದನ್ನ ಆಟೋದಲ್ಲಿ ಇರಿಸಿದ್ದಾಳೆ. ನಂತರ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಸಂಜೆ ಕೆರೆಯಲ್ಲಿ ಶ್ರೀಕಾಂತ್ ಮೃತದೇಹ ಪತ್ತೆಯಾಗಿದ್ದು, ಅದನ್ನ ಮೇಲಕ್ಕೆತ್ತುವಾಗ ಅಂಜನಾಳ ಮೃತದೇಹ ಸಹ ಪತ್ತೆಯಾಗಿದೆ.
ಮೃತದೇಹದ ಕುರಿತು ಮಾಹಿತಿ ಕಲೆ ಹಾಕಿದಾಗ ಇಬ್ಬರೂ ಸಹ ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದು, ಶ್ರೀಕಾಂತ್ ಕಾಣೆಯಾದ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ ಅಂಜನಾ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ತಿಳಿದು ಬಂದಿದೆ. ಸದ್ಯ ಇಬ್ಬರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.