ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್ಗೆ ಕಗ್ಗಂಟಾಗಿದೆ. ಆರೋಪಿಯಾಗಿ ಜೈಲು ಸೇರುವುದಕ್ಕಿಂತ ಮುಂಚೆ ಇದ್ದ ಸಂಕಷ್ಟಗಳು ಒಂದೆಡೆಯಾದರೆ, ಜೈಲು ಸೇರಿದ ಮೇಲೆ ಇನ್ನೊಂಥರಾ ಸಂಕಷ್ಟ ಎದುರಾಗುತ್ತಿವೆ.
ಈ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಪವಿತ್ರಾ ಗೌಡ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಉಲ್ಲೇಖ ಮಾಡಿದ್ದಾರೆ. ಪವಿತ್ರಾ ಗೌಡ ದರ್ಶನ್ ಪತ್ನಿ ಅಲ್ಲ. ನಾನು ಹಾಗೂ ದರ್ಶನ್ ಅವರು 19-05-2003 ರಲ್ಲಿ ವಿವಾಹವಾಗಿದ್ದೇವೆ. ನಮಗೆ ವಿನೀಶ್ ಎಂಬ ಮಗನಿದ್ದಾನೆ ಎಂದು ಬರೆದಿದ್ದಾರೆ.
ಹಾಗೆಯೇ ಪವಿತ್ರಾ ಗೌಡ ಕೂಡ ಸಂಜಯ್ ಸಿಂಗ್ ಎಂಬುವವರನ್ನು ವಿವಾಹವಾಗಿದ್ದರು. ಇವರಿಬ್ಬರಿಗೆ ಒಬ್ಬಳು ಹೆಣ್ಣು ಮಗಳಿದ್ದಾಳೆ ಎಂದು ನಗರ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅಷ್ಟಕ್ಕೂ ಈ ಪತ್ರ ಬರೆಯುವುದಕ್ಕೆ ಪ್ರಮುಖ ಕಾರಣವೊಂದಿದೆ. ದರ್ಶನ್ ಕೊಲೆ ಪ್ರಕರಣದಲ್ಲಿ ದರ್ಶನ್ರನ್ನು ಬಂಧಿಸಿದ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ದಯಾನಂದ್ ಅವರು ಪವಿತ್ರಾ ಗೌಡ ದರ್ಶನ್ ಪತ್ನಿ ಎಂದಿದ್ದರು ಹಾಗೂ ಗೃಹಸಚಿವರೂ ಕೂಡ ಅದನ್ನೇ ಉಚ್ಚರಣೆ ಮಾಡಿದ್ದರು. ಈ ಕಾರಣಕ್ಕೆ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದು, ಪೊಲೀಸ್ ರೆಕಾರ್ಡ್ನಲ್ಲಿ ಪವಿತ್ರಾ ಗೌಡ ಅವರನ್ನು ದರ್ಶನ್ ಪತ್ನಿ ಎಂದು ಉಲ್ಲೇಖ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಪತ್ರ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರ ಕಚೇರಿಗೆ ತಲುಪಿದೆ.