ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನ ಅರ್ಜಿಯ ವಿಚಾರಣೆ ಇಂದು ಶಾಂತಿನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದ್ದು, ಆರಂಭಿಕ ವಿಚಾರಣೆ ಬಳಿಕ, ಮುಂದಿನ ವಿಚಾರಣೆಯನ್ನು ಆಗಸ್ಟ್ 23 ಕ್ಕೆ ಮುಂದೂಡಲಾಗಿದೆ.
ಯುವ ರಾಜ್ ಕುಮಾರ್ ಸಲ್ಲಿಸಿರುವ ವಿಚ್ಛೇದನಕ್ಕೆ ಶ್ರೀದೇವಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ಬಗ್ಗೆ ವಾದ ಮಂಡಿಸಲು ಶ್ರೀದೇವಿ ಪರ ವಕೀಲರು ಅವಕಾಶ ಕೇಳಿದರು. ಆದರೆ ಇದಕ್ಕೆ ಅವಕಾಶ ನೀಡದ ನ್ಯಾಯಾಧೀಶರು. ಇದು ಕೌಟುಂಬಿಕ ಕಲಹವಾದ್ದರಿಂದ ಮೊದಲು ಕೌನ್ಸಲಿಂಗ್ ಆಗಬೇಕು. ಅದು ಮುಕ್ತಾಯ ಆದ ಬಳಿಕವಷ್ಟೆ ಆಕ್ಷೇಪಣೆ ಕೇಳಲಾಗುತ್ತದೆ ಎಂದಿದ್ದಾರೆ. ಮೀಡಿಯೇಟರ್ ಕೌನ್ಸಲಿಂಗ್ ನಡೆದ ಬಳಿಕವಷ್ಟೆ ಪ್ರಕರಣದ ಮುಂದಿನ ಹಂತಕ್ಕೆ ಅವಕಾಶ ನೀಡಲಾಗುತ್ತದೆ ಎಂದು 1 ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶೆ ಕಲ್ಪನಾ ಹೇಳಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 23 ಕ್ಕೆ ಮುಂದೂಡಿದ್ದಾರೆ.