ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವು 2024ರ ಟಿ20 ವಿಶ್ವಕಪ್ ಗೆಲ್ಲಲು ಹಾರ್ದಿಕ್ ಪಾಂಡ್ಯ ಕೊನೆ ಓವರ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಟೀಮ್ ಇಂಡಿಯಾ 17 ವರ್ಷಗಳ ನಂತರ ಎರಡನೇ ಟಿ20 ವಿಶ್ವಕಪ್ ಗೆದ್ದಿತ್ತು. ಕೇವಲ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಾತ್ರವಲ್ಲದೆ, ಟೂರ್ನಿಯುದ್ದಕ್ಕೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಅಮೋಘ ಪ್ರದರ್ಶನ ನೀಡಿದರು. ಇದರ ಪ್ರತಿಫಲವಾಗಿ ಟೀಮ್ ಇಂಡಿಯಾ ಗೆಲ್ಲುವ ಸನಿಹ ಬರಲು ಸಾಧ್ಯವಾಯಿತು.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಫಾರ್ಮ್ ಕಳೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ ಕಳಪೆ ಆಟ ಪ್ರದರ್ಶನ ನೀಡಿದ್ದರು. ಇದಾದ ನಂತರ ಟಿ20 ವಿಶ್ವಕಪ್ನ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದಾಗಲೂ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಎಲ್ಲದರ ಮಧ್ಯೆ ಹಾರ್ದಿಕ್ ಪಾಂಡ್ಯ ಅವರ ವೈವಾಹಿಕ ಜೀವನ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದವು.
ಈ ಎಲ್ಲಾ ಸಾಲು ಸಾಲು ಟೀಕೆಗಳು, ಅವಮಾನಗಳನ್ನು ಸಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಅವರು 2024 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿ ಟೀಮ್ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪುರುಷರ ಟಿ20 ಆಲ್ರೌಂಡರ್ ಶ್ರೇಯಾಂಕದಲ್ಲಿ ನಂಬರ್-1 ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ತಲುಪಿದ್ದಾರೆ.
ಐಸಿಸಿ ತನ್ನ ಟಿ20 ಅಂತರಾಷ್ಟ್ರೀಯ ಶ್ರೇಯಾಂಕಗಳನ್ನು ನವೀಕರಿಸಿದೆ. ನೂತನ ಶ್ರೇಯಾಂಕ ಪ್ರಕಾರ ಹಾರ್ದಿಕ್ ಪಾಂಡ್ಯ ಎರಡು ಸ್ಥಾನ ಮೇಲೇರಿ ನಂಬರ್-1 ಆಗಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಹಾರ್ದಿಕ್ ಪಾಂಡ್ಯ ಹಿಂದಿಕ್ಕಿದ್ದಾರೆ.