ರೇಖಾದಾಸ್… ಕನ್ನಡ ಚಿತ್ರರಂಗ ಕಂಡ ಬಹುಮುಖ ಪ್ರತಿಭೆಗಳ ಪೈಕಿ ಈ ನಟಿ ಕೂಡ ಒಬ್ಬರು. ಸಿನಿಮಾ, ಸೀರಿಯಲ್, ನಾಟಕ, ಆರ್ಕೆಸ್ಟ್ರಾ ಹೀಗೆ ನಾನಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದಂತಹ ರೇಖಾದಾಸ್ ಕಳೆದ ಆರು ವರ್ಷಗಳಿಂದ ಕೆಲಸ ಇಲ್ಲದೇ ಮನೆಯಲ್ಲಿ ಕೂತಿದ್ದಾರಂತೆ. ಯಾರೊಬ್ಬರು ಕೂಡ ಕರೆದು ಅವಕಾಶ ಕೊಡ್ತಿಲ್ವಂತೆ. ಸಣ್ಣದೊಂದು ಚಾನ್ಸ್ ಸಿಕ್ಕರೆ ಸಾಕು ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತೆ ಅಂತ ಎದುರುನೋಡುತ್ತಲೇ ಆರು ವರ್ಷಗಳು ಉರುಳಿದೆಯಂತೆ. ಈ ಸಂಗತಿಯನ್ನ ಹಂಚಿಕೊಂಡು ಕಣ್ತುಂಬಿಕೊಂಡ ಹಿರಿಯ ನಟಿ ರೇಖಾದಾಸ್, ನಿರ್ಮಾಪಕಿ ಶ್ರುತಿ ನಾಯ್ಡು ಪ್ರೊಡಕ್ಷನ್ ಕಡೆಯಿಂದ ಸಿಕ್ಕಂತಹ ಅವಕಾಶದ ಬಗ್ಗೆ ಹೇಳಿಕೊಂಡರು.
ಅಷ್ಟಕ್ಕೂ, ಸಿನಿಮಾ ಲೋಕದಲ್ಲಿ 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ನಟಿ ರೇಖಾದಾಸ್ ಗೆ ಜೀವನ ನಿರ್ವಹಣೆಗೂ ಕಷ್ಟ ಇದೆ ಅಂದರೆ ನಂಬೋದು ಕಷ್ಟನೇ. ಆದರೆ ಖುದ್ದು ನಟಿಯೇ ಹೇಳಿಕೊಂಡಂತೆ ಆರ್ಥಿಕ ಪರಿಸ್ಥಿತಿ ಅಷ್ಟೇನು ಚೆನ್ನಾಗಿಲ್ವಂತೆ. ಬಣ್ಣ ಹಚ್ಚಬೇಕು ಬದುಕು ನಡೆಸಬೇಕು ಎನ್ನುವ ನಟಿ ರೇಖಾದಾಸ್ ಅವಕಾಶಕ್ಕಾಗಿ ಎದುರುನೋಡ್ತಿದ್ದರಂತೆ. ಈ ಟೈಮ್ಗೆ ಶ್ರುತಿ ನಾಯ್ಡು ಅವರ ಚಿತ್ರ ಪ್ರೊಡಕ್ಷನ್ ಕಡೆಯಿಂದ ದೂರವಾಣಿ ಕರೆಹೋಗಿದ್ದು ʻನನ್ನ ದೇವ್ರುʼ ಸೀರಿಯಲ್ಗೆ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಸೀರಿಯಲ್ ಆರಂಭದ ಪೂರ್ವಭಾವಿ ಸುದ್ದಿಗೋಷ್ಟಿ ನಡೆಸಿದ್ದು ಅಲ್ಲಿಗೆ ಹಿರಿಯ ನಟಿ ರೇಖಾದಾಸ್ ಬಂದಿದ್ದರು. ಈ ವೇಳೆ ಭಾವುಕರಾಗಿ ಮಾತನಾಡಿದರು.
ಆರು ವರ್ಷ ಕೆಲಸ ಇಲ್ಲದ ಕಾರಣ ಮನೆಯಲ್ಲಿ ಕೂತಿದ್ದೆ ನಾನು, ಜನಾನೇ ನನ್ನ ಮರೆತುಬಿಟ್ಟಿದ್ದರು. ಇಂತಹ ಟೈಮ್ನಲ್ಲಿ ಕೆಲಸ ಇಲ್ಲದ ಕಾರಣ, ಕಷ್ಟ ಇದ್ದ ಕಾರಣ ಶ್ರುತಿ ನಾಯ್ಡು ಪ್ರೊಡಕ್ಷನ್ನಿಂದ ಕಾಲ್ ಬಂತು. ನಂಗಂತೂ ಶಾಕ್ ಆಯ್ತು. ದೇವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ದೇನೋ ನಂಗೆ ಗೊತ್ತಿಲ್ಲ. ಕಷ್ಟದಲ್ಲಿದ್ದಾಗ ಕರೆದು ಅವರ ಸೀರಿಯಲ್ನಲ್ಲಿ ಅವಕಾಶ ಕೊಟ್ಟಿದ್ದಾರೆ. ಎಷ್ಟೋ ವರ್ಷಗಳ ನಂತರ ಟಿವಿ ಸೀರಿಯಲ್ಗೆ ಬಂದಿದ್ದೀನಿ.ನಿರ್ಮಾಪಕಿ ಶ್ರುತಿ ನಾಯ್ಡು ಮೇಡಂಗೆ ದೇವರು ಆಯಸ್ಸು, ಆರೋಗ್ಯ ಕೊಡಲಿ ಎಂದು ಆಶಿಸುತ್ತೇನೆ. ನನ್ನಂತಹ ಬಡ ಕಲಾವಿದೆ, ಹಿರಿ ಕಲಾವಿದೆನಾ ಗುರ್ತಿಸಿ ಅವರು ಚಾನ್ಸ್ ಕೊಟ್ಟಿದ್ದಾರೆ. ಅಂದ್ಹಾಗೇ, ನನಗೆ ಕನ್ನಡ ಓದಲಿಕ್ಕೆ ಅಷ್ಟು ಬರಲ್ಲ. ಆದರೆ ಶ್ರುತಿ ನಾಯ್ಡು ಅವರ ಪತಿ ರಮೇಶ್ ಇಂದಿರಾ ಸರ್, ಚಿಕ್ಕ ಮಕ್ಕಳಿಗೆ ಎಬಿಸಿಡಿ ಹೇಳಿಕೊಟ್ಟ ನರೇಷನ್ ಕೊಟ್ಟು ನನ್ನಿಂದ ಆಕ್ಟಿಂಗ್ ತೆಗೆಸಿಕೊಳ್ತಿದ್ದಾರೆ. ಹೀಗಾಗಿ, ಇಡೀ ಟೀಮ್ಗೆ ನಾನು ಚಿರರುಣಿ ಎಂದರು.
ಅಂದ್ಹಾಗೇ, ರೇಖಾದಾಸ್ 14 ನೇ ವಯಸ್ಸಿನಲ್ಲಿಯೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. ಟೈಗರ್ ಪ್ರಭಾಕರ್ ಅಭಿನಯದ ಕಂಪನ' ಇವರ ಮೊದಲ ಚಿತ್ರ. ನಾಯಕನಟಿಯರ ಸ್ನೇಹಿತೆ ಪಾತ್ರದಲ್ಲಿ ನಟಿಸುತ್ತಿದ್ದ ಇವರಿಗೆ ಬ್ರೇಕ್ ಕೊಟ್ಟ ಚಿತ್ರ ಶಶಿಕುಮಾರ್ ಅಭಿನಯದ
ಬಾರೆ ನನ್ನ ಮುದ್ದಿನ ರಾಣಿ’ ಅನಂತರ ಇವರು ಶ್ವೇತಾಗ್ನಿ,ಹೂವು ಹಣ್ಣು ಸೇರಿ ಹಲವು ಚಿತ್ರಗಳಲ್ಲಿ ನಟಿಸಿದರು. ಶಾಂತಿ ಕ್ರಾಂತಿ, ಮಾಲಾಶ್ರೀ ಮಾಮಾಶ್ರೀ, ಕರ್ಪೂರದ ಗೊಂಬೆ,ಸಿಂಹಾದ್ರಿಯ ಸಿಂಹ, ಹೀಗೆ ಹೆಸರಾಂತ ಚಿತ್ರಗಳಲ್ಲಿ ಅಭಿನಯಿಸೋ ಅವಕಾಶ ಸಿಗ್ತು. ಬರೋಬ್ಬರಿ 650ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಹಾಸ್ಯನಟ ಟೆನ್ನಿಸ್ ಕೃಷ್ಣ ಜೊತೆಗೆ ಭರ್ತಿ 100 ಸಿನಿಮಾ ಮಾಡಿದ್ದಾರೆ. 6000ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳು, 3000 ಆರ್ಕೆಸ್ಟ್ರಾ ಕಾರ್ಯಕ್ರಮಗಳು, 500ಕಿರುತೆರೆ ಧಾರಾವಾಹಿಗಳು, 3500 ಹಾಸ್ಯ ಕಾರ್ಯಕ್ರಮಗಳಲ್ಲಿ ಮಿಂಚುವ ಅವಕಾಶ ಇವರಿಗೆ ಸಿಕ್ಕಿದೆ. ಆದರೂ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಈಗಲೂ ಬಣ್ಣ ಹಚ್ಚಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಒಟ್ನಲ್ಲಿ ಕಲಾಸರಸ್ವತಿಯನ್ನೇ ನಂಬಿ ಬದುಕ್ತಿರುವ ಈ ಹಿರಿಯನಟಿಯ ಬದುಕು ಹಸನಾಗಲಿ. ಒಳ್ಳೊಳ್ಳೆ ಅವಕಾಶಗಳು ಹರಿದುಬರಲಿ ಅನ್ನೋದೇ ನಮ್ಮ ಆಶಯ