ಮಂಡ್ಯದಿಂದ ಗೆದ್ದು ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ಇಂದು ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಮಂಡ್ಯಕ್ಕೆ ತೆರಳಿದ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದರು. ಬಳಿಕ ಹೆಚ್.ಡಿ.ಕುಮಾರಸ್ವಾಮಿಯವರು ಜನತಾ ದರ್ಶನಕ್ಕೆ ಚಾಲನೆ ನೀಡಿದರು. ಜನತಾ ದರ್ಶನದ ಸಮಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಹೆಚ್ಡಿಕೆ ಜನತಾ ದರ್ಶನ ನಡೆಯದಂತೆ ತಡೆಯಲು ರಾಜ್ಯಸರ್ಕಾರ ಸಾಕಷ್ಟು ಪ್ರಯತ್ನ ಮಾಡಿದೆ ಎಂದು ಕಿಡಿಕಾರಿದರು.
ಇಂದು ಮಂಡ್ಯದಲ್ಲಿ ಜನತಾ ದರ್ಶನ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಜನತಾ ದರ್ಶನ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಜನತಾ ದರ್ಶನದ ಬಗ್ಗೆನೇ ಸಚಿವ ಸಂಪುಟದ ಸಭೆ ಕರೆದು ಚರ್ಚೆ ಮಾಡಿದ್ದಾರೆ. ನೀವು ಅಧಿಕಾರಿಗಳನ್ನು ದೂರು ಇಡಬಹುದು. ಆದರೆ ಜನರನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಸಂಸದರು ಈ ರೀತಿ ಸಭೆ ಮಾಡಿದ್ದಾಗ ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಚುನಾವಣೆಗೆ ಬಂದು ಜನ ಸ್ಪಂದನ ಕಾರ್ಯಕ್ರಮ ಮಾಡಿದಾಗ ಎಲ್ಲಿ ಹೋಗಿದ್ರಿ ? ಈಗ ಜನತಾ ದರ್ಶನ ತಪ್ಪಿಸಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.