ಸುಪ್ರೀಂ ಕೋರ್ಟ್ ರದ್ದುಪಡಿಸಿರುವ 2018 ರ ಚುನಾವಣಾ ಬಾಂಡ್ ಯೋಜನೆಯಡಿ ರಾಜಕೀಯ ಪಕ್ಷಗಳು ಸಂಗ್ರಹಿಸಿರುವ ಎಲ್ಲಾ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಚುನಾವಣಾ ಬಾಂಡ್ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಪಡೆದಿರುವ ಸುಮಾರು 16,518 ಕೋಟಿ ರೂಪಾಯಿ ಹಣ ದೇಣಿಗೆಯಲ್ಲ, ಬದಲಾಗಿ ಅದು ಕಾರ್ಪೋರೇಟ್ ಸಂಸ್ಥೆಗಳು ಲಾಭ ಪಡೆಯಲು ನೀಡಿರುವುದಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಚುನಾವಣಾ ಬಾಂಡ್ ಮೂಲಕ ತಾವು ಪಡೆದ ಹಣಕ್ಕಾಗಿ ರಾಜಕೀಯ ಪಕ್ಷಗಳು ಕಾರ್ಪೋರೇಟ್ ದಾನಿಗಳಿಗೆ ಮಾಡಿಕೊಟ್ಟ ಕಾನೂನುಬಾಹಿರ ಅನುಕೂಲಗಳ ಕುರಿತಂತೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವಂತೆಯೂ ಅರ್ಜಿದಾರರು ಕೋರಿದ್ದಾರೆ.
ಒಟ್ಟು 23 ರಾಜಕೀಯ ಪಕ್ಷಗಳು ಸುಮಾರು 1,210 ಕ್ಕೂ ಹೆಚ್ಚು ದಾನಿಗಳಿಂದ ಚುನಾವಣಾ ಬಾಂಡ್ ಮೂಲಕ ಅಂದಾಜು 12,516 ಕೋಟಿ ರೂಪಾಯಿ ಪಡೆದಿದೆ. ಸುಮಾರು 21 ದಾನಿಗಳು ತಲಾ 100 ಕೋಟಿ ರೂ.ಗೂ ಅಧಿಕ ಮೊತ್ತವನ್ನು ನೀಡಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ವಿವರಗಳನ್ನು ತೆರದಿಟ್ಟಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.